ಸಮಗ್ರ ನ್ಯೂಸ್: ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ. ಶಿಕ್ಷಕ ಇಡೀ ಸಮಾಜದ ಪರಿವರ್ತಕ, ನಿರ್ಮಾತ್ರ.
ಶಿಕ್ಷಕರು ಮಕ್ಕಳಲ್ಲಿ ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆ ಕರೆದುಕೊಂಡು ಹೋಗುವ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಸೀತಾ ರಾಘವ ಪದವಿಪೂರ್ವ ಕಾಲೇಜು, ಪೆರ್ನಾಜೆ ಇಲ್ಲಿಯ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್.ಗೋಪಾಲಕೃಷ್ಣ ಅವರು ಹೇಳಿದರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆ. 5ರಂದು ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಬಾಗಿತ್ವದಲ್ಲಿ ಆಚರಿಸಲ್ಪಟ್ಟ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸುಶ್ರಾವ್ಯವಾದ ಹಾಡಿನೊಂದಿಗೆ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ. ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳು ತಪ್ಪಿದಾಗ ತಿದ್ದುವ ಮತ್ತು ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸಿಸುವ ಮಾರ್ಗದರ್ಶಕರು. ಅವರ ಮಾತನ್ನು ಪಾಲಿಸುವುದೇ ನೀವು ಆಚರಿಸುವ ಶಿಕ್ಷಕರ ದಿನಾಚರಣೆಗೆ ಸಿಗುವ ಮಹತ್ವ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ
ಪ್ರೊ. ಎಂ.ಬಾಲಚಂದ್ರ ಗೌಡ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಯನ್ನು, ಸಾಧನೆಯನ್ನು ಕಂಡು ಖುಷಿ ಪಡುತ್ತಾರೆ. ನೀವು ಮಾಡುವ ಒಳ್ಳೆಯ ಕೆಲಸಗಳೇ ಶಿಕ್ಷಕರಿಗೆ ಕೊಡುವ ಗೌರವ ಎಂದು ತಮ್ಮ ವೃತ್ತಿ ಜೀವನವನ್ನು ನೆನಪಿಸಿಕೊಂಡರು.
ವೇದಿಕೆಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ವಿಶ್ವನಾಥ ಕೆ.ಟಿ., ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕಿ ಡಾ. ಮಮತಾ ಕೆ. ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ವಿದ್ಯಾರ್ಥಿ ಸಂಘದವರು ಹಾಡಿನ ಮೂಲಕ ಶಿಕ್ಷಕರಿಗೆ ಗೌರವ ಅರ್ಪಿಸಿದರು. ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಬೋಧಕ ಹಾಗೂ ಬೋಧಕೇತರ ವೃಂದದವರಿಗೆ ಸ್ಮರಣಿಕೆಯನ್ನು ನೀಡುವ ಮೂಲಕ ಶಿಕ್ಷಕರ ದಿನಾಚರಣೆಯ ಗೌರವವನ್ನು ಸಲ್ಲಿಸಿದರು ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ತೃತೀಯ ಬಿಕಾಂ ವಿದ್ಯಾರ್ಥಿ ಜೋಸ್ಬಿನ್ ಬಾಬು ಸ್ವಾಗತಿಸಿ, ತೃತೀಯ ಬಿಎ ವಿದ್ಯಾರ್ಥಿನಿ ನಿರೀಕ್ಷಾ ವಂದಿಸಿ, ದ್ವಿತೀಯ ಬಿಎ ವಿದ್ಯಾರ್ಥಿನಿ ಗಾನಾ ಹಾಗೂ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅನ್ವಯ ಕಾರ್ಯಕ್ರಮ ನಿರೂಪಿಸಿದರು.