ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಅಪ್ಡೇಟ್ ನೀಡಿರುವ ಆಸ್ಪತ್ರೆ ಡಾಕ್ಟರ್ ಸತೀಶ್ ಚಂದ್ರ, ಕುಮಾರಸ್ವಾಮಿ ಅವರಿಗೆ ಲಘುವಾಗಿ ಸ್ಟ್ರೋಕ್ ಆಗಿತ್ತು. ಸೂಕ್ತ ಚಿಕಿತ್ಸೆ ನೀಡಿದ್ದು, ಈಗ ಚೇತರಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಅವರು ಆಸ್ಪತ್ರೆಯಿಂದ ಶುಕ್ರವಾರದಂದು ಡಿಸ್ಚಾರ್ಜ್ ಆಗಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಅಪೊಲೋ ಆಸ್ಪತ್ರೆ ಬೆಳಗ್ಗೆ 11 ಗಂಟೆಗೆ ಪ್ರಕಟಿಸಿದ ಹೆಲ್ತ್ ಬುಲೆಟಿನ್ ಪ್ರಕಾರ, ಹೆಚ್ ಡಿ ಕುಮಾರಸ್ವಾಮಿ ಅವರನ್ನು ಬೆಳಗಿನ ಜಾವ 3.40ರ ಹೊತ್ತಿಗೆ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಸತೀಶ್ ಚಂದ್ರ ಮತ್ತು ಅವರ ತಂಡ ಚಿಕಿತ್ಸೆ ನೀಡುತ್ತಿದೆ. ಮಾಜಿ ಮುಖ್ಯಮಂತ್ರಿಯವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಸಂಜೆ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿದ ಡಾ.ಸತೀಶ್ ಚಂದ್ರ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೈನಲ್ಲಿ ಸ್ವಲ್ಪ ತೊಂದರೆ ಇತ್ತು. ಈಗ ಎಲ್ಲವೂ ಸರಿಯಾಗಿದೆ. ಚಿಕಿತ್ಸೆ ನೀಡಲಾಗಿದೆ. ಚೆನ್ನಾಗಿ ಮಾತು ಕೂಡ ಆಡ್ತಾರೆ. ಹೃದಯ ಬಡಿತ, ರಕ್ತದೊತ್ತಡ ಎಲ್ಲವೂ ಉತ್ತಮವಾಗಿದೆ. ಆರೋಗ್ಯವೂ ಚೇತರಿಕೆಯಾಗಿದೆ. ಅವರು ತಮ್ಮ ಕೆಲಸವನ್ನು ತಾವೇ ಮಾಡಬಲ್ಲರು. ಅಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ರೀತಿ ಕೇಸ್‌ಗಳಲ್ಲಿ ಸ್ಟ್ರೋಕ್ ಆಗಿ ಮೂರು ಗಂಟೆ ಒಳಗೆ ಆಸ್ಪತ್ರೆಗೆ ಬಂದರೆ ಪೂರ್ಣವಾಗಿ ಗುಣಪಡಿಸಬಹುದು ಎಂದು ಹೇಳಿದರು.
ಕುಮಾರಸ್ವಾಮಿ ಅವರಿಗೆ ಮಿದುಳಿನ ಎಡಭಾಗದಲ್ಲಿ ತೊಂದರೆ ಆದ ಕಾರಣ, ಶರೀರದ ಬಲಭಾಗಕ್ಕೆ ಸಮಸ್ಯೆ ಆಗಿತ್ತು. ಲಘುವಾದ ಸ್ಟ್ರೋಕ್ ಅಷ್ಟೆ. ಆರೋಗ್ಯ ತಪಾಸಣೆ ಮಾಡಿ, ಕೂಡಲೇ ಅಗತ್ಯ ಚಿಕಿತ್ಸೆ ನೀಡಿರುವ ಕಾರಣ ಅವರು ಮೊದಲಿನಂತೆಯೇ ಆರೋಗ್ಯವಾಗಿ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸಬಲ್ಲರು ಎಂದು ಡಾ.ಸತೀಶ್ ಚಂದ್ರ ಸ್ಪಷ್ಟಪಡಿಸಿದ್ದಾರೆ.