ಸಮಗ್ರ ನ್ಯೂಸ್: ‘ಆರೋಪಿಗಳೆಂದು ನಾವು ಹೇಳುವ ವ್ಯಕ್ತಿಗಳಿಗೆ ಮಾಧ್ಯಮಗಳ ವಿಡಿಯೋ ಚಿತ್ರೀಕರಣ ಮುಖಾಂತರ ಮಂಪರು ಪರೀಕ್ಷೆ ಮಾಡಿಸಿ, ಆ ಮೂಲಕ ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಿ’ ಎಂದು ಸೌಜನ್ಯ ತಾಯಿ ಕುಸುಮಾವತಿ ಆಗ್ರಹ ವ್ಯಕ್ತಪಡಿಸಿದ್ದಾರೆ.
ಅವರು ಇಂದು(ಆ. 28) ಬೆಳ್ತಂಗಡಿಯ ತಾಲೂಕು ಕಚೇರಿ ಮುಂಭಾಗ ನಡೆದ ‘ಬೆಳ್ತಂಗಡಿ ಚಲೋ’ ಮಹಾಧರಣಿಯಲ್ಲಿ ಮಾತನಾಡಿದರು.
‘ನನ್ನ ಮಗಳನ್ನು ಒಂದೇ ರಾತ್ರಿಯಲ್ಲಿ ಹರಿದು ಮುಕ್ಕಿದ್ದಾರೆ. ಇದೀಗ ಸಂತ್ರಸ್ತರಾದ ನಮ್ಮನ್ನೇ ಆರೋಪಿಗಳಂತೆ ಬಿಂಬಿಸಲಾಗುತ್ತಿದೆ. ನಾವು ಮಾಡಿದ ಅನ್ಯಾಯವಾದರೂ ಏನು? ನ್ಯಾಯ ಕೇಳುವುದೇ ನಮ್ಮ ತಪ್ಪಾ? ಹದಿನೇಳು ವರ್ಷ ಸಾಕಿ ಸಲಹಿದ ಮಗುವನ್ನು ಕಾಮತೃಷೆಗಾಗಿ ಹೊತ್ತೊಯ್ದು ಅತ್ಯಾಚಾರ ಮಾಡಿ ಎಸೆದು ಹೋಗುತ್ತಾರೆ ಎಂದರೆ ಅದರ ಬಗ್ಗೆ ನಾವು ಮಾತನಾಡಬಾರದೇ?’ ಎಂದು ಕುಸುಮಾವತಿ ಕಣ್ಣೀರಾದರು.
ವೇದಿಕೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಸೇರಿದಂತೆ ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರು ಭಾಗವಹಸಿದ್ದರು.