ಭೋಪಾಲ್: ಡೆಲ್ಟಾ ಪ್ಲಸ್ ರೂಪಾಂತರಿ ತಗುಲಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕೋವಿಡ್ 19 ಸೋಂಕಿನ ರೂಪಾಂತರಿ ಡೆಲ್ಟಾ ಪ್ಲಸ್ ಸೋಂಕು ತಾಗಿದ್ದ ಮಹಿಳೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಮಧ್ಯಪ್ರದೇಶದಲ್ಲಿ ಇದುವರೆಗೆ ಐದು ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಮೂರು ಪ್ರಕರಣಗಳು ಭೋಪಾಲ್‌ನಲ್ಲಿ ಪತ್ತೆಯಾಗಿದ್ದರೆ ಎರಡು ಪ್ರಕರಣಗಳು ಉಜ್ಜಯಿನಿಯಲ್ಲಿ ದೃಢಪಟ್ಟಿದೆ
ಡೆಲ್ಟಾ ಪ್ಲಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪತಿಗೆ ಮೊದಲು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು, ಬಳಿಕ ಮಹಿಳೆಗೆ ಸೋಂಕು ತಾಗಿದೆ, ಮಹಿಳೆಯ ಪತಿ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ, ಆದರೆ ಮಹಿಳೆ ಇದುವರೆಗೂ ಲಸಿಕೆ ಪಡೆದಿಲ್ಲ.
ಈ ಬಗ್ಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಸರ್ಕಾರವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ, ಡೆಲ್ಟಾ ಪ್ಲಸ್ ಸೋಂಕು ತಾಗಿದ ರೋಗಿಗಳ ಸಂಪರ್ಕಕ್ಕೆ ಬಂದವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.
ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳು ಹೆಚ್ಚು ಕಂಡುಬರುತ್ತಿತ್ತು,ಈ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ, ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ತಿಳಿಸಲಾಗಿದೆ.