ಸಮಗ್ರ ನ್ಯೂಸ್: ‘ಸೌಜನ್ಯಾಳ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಆ.28ರಂದು ಬೆಳ್ತಂಗಡಿ ತಾಲ್ಲೂಕು ಕಚೇರಿ ಎದುರು ಮಹಾಧರಣಿ ನಡೆಯಲಿದ್ದು, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ನಮ್ಮ ಹೋರಾಟ’ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸೌಜನ್ಯಾ ಹತ್ಯೆಯಾದ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರ ನೇತೃತ್ವದ ಸರ್ಕಾರ ಸಿಐಡಿ ತನಿಖೆ ಮಾಡಿಸಿಯೂ ಸಂತೋಷ್ ರಾವ್ ಆರೋಪಿ ಎಂದು ಹಠ ಹಿಡಿದಾಗ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡ ಜನ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಬಳಿಕ ಸಿದ್ದಾರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಆದರೆ, ಪ್ರಕರಣ ನಡೆದು ಇಷ್ಟು ವರ್ಷವಾದರೂ ಶಾಸಕ ಹರೀಶ್ ಪೂಂಜ ವಿಧಾನ ಸಭೆಯಲ್ಲಾಗಲಿ, ಪ್ರತಾಪಸಿಂಹ ನಾಯಕ್ ವಿಧಾನ ಪರಿಷತ್‌ನಲ್ಲಾಗಲಿ, ಸಂಸದ ನಳಿನ್‌ಕುಮಾರ್ ಕಟಿಲ್ ಸಂಸತ್‌ನಲ್ಲಾಗಲಿ ಈ ವಿಷಯ ಪ್ರಸ್ತಾಪಿಸಿಲ್ಲ ಎಂದು ಅವರು ಆರೋಪಿಸಿದರು.
ಇದೀಗ ಸಿಬಿಐ ನ್ಯಾಯಾಲಯ ತನ್ನ ತನಿಖಾ ವರದಿಯಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತು ಮಾಡಿದೆ. ಆದರೆ, ನಿಜವಾದ ಆರೋಪಿಯ ಪತ್ತೆಗೆ ಸಿಬಿಐ ತನಿಖೆ ನಡೆಸಿಲ್ಲ. ನಮಗೆ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣದ ಮರುತನಿಖೆ ಮಾಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಯನ್ನೂ ಭೇಟಿ ಒತ್ತಾಯಿಸಿದ್ದೇನೆ ಎಂದರು.