ಸಮಗ್ರ ನ್ಯೂಸ್: ತಾಯಿ ಪ್ರೀತಿಯನ್ನು ಜಗತ್ತಿನ ಯಾವುದೇ ಪ್ರೀತಿಗೂ ಹೋಲಿಸಲಾಗದು. ಎಷ್ಟೇ ಕಷ್ಟ ಎದುರಾದರೂ ಅದನ್ನೆಲ್ಲ ನುಂಗಿ ಮಕ್ಕಳ ಏಳಿಗೆಗಾಗಿ ಶ್ರಮಿಸುವವಳು ತಾಯಿ. ತನ್ನ ಕರುಳ ಕುಡಿಯನ್ನು ಕೆಲಸದ ಮಧ್ಯೆಯೂ ಪೋಷಿಸುವ ತಾಯಿಯ ವಿಡಿಯೋ ವೈರಲ್ ಆಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಸೆರೆಯಾದ ವೀಡಿಯೋ ಈಗ ವೈರಲ್ ಆಗುತ್ತಿದೆ. ಮಂಗಳೂರು – ಬೆಂಗಳೂರು ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಡಿವೈಡರ್ ನಲ್ಲಿ ಗಿಡ ನೆಡಲಾಗುತ್ತಿದೆ. ಸದ್ಯ ತಾಯಿಯ ಮಮತೆ ಸಾರುವ ರಿಯಲ್ ದೃಶ್ಯವೊಂದು ತಾನು ಮಾಡುವ ಕೂಲಿ ಕೆಲಸದ ಮಧ್ಯೆಯೂ ಮಗುವಿಗಾಗಿ ಮಿಡಿಯುವ ತಾಯಿಯ ಜೀವವೊಂದು ಎಲ್ಲರ ಗಮನ ಸೆಳೆದಿದೆ.
ಈ ಕೆಲಸ ನಿರ್ವಹಿಸುವ ಕೂಲಿ ಕೆಲಸದ ಮಹಿಳೆಯೊಬ್ಬರು ರಸ್ತೆಯಲ್ಲಿ ನಿಂತಿರುವ ಟಿಪ್ಪರ್ ಗೆ ಬಟ್ಟೆ ಕಟ್ಟಿ ತನ್ನ ಮಗುವನ್ನು ತೂಗುತ್ತಿದ್ದಾರೆ. ಬಿಡುವಿಲ್ಲದ ಕೆಲಸದ ಮಧ್ಯೆ ಮಗುವಿನ ಆರೈಕೆ ಮಾಡುವ ತಾಯಿಯ ಪ್ರೀತಿ ಸಾರುವ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಾಮಾನ್ಯವಾಗಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಮುಂತಾದ ಕೆಲಸಗಳನ್ನು ಅಲೆಮಾರಿಗಳು ನಿರ್ವಹಿಸುವ ಅವರು, ಕೆಲಸ ನಡೆಯುವ ಸ್ಥಳಗಳಲ್ಲಿ ಟೆಂಟ್ ಹಾಕಿ ವಾಸ ಮಾಡುತ್ತಾ ಇರುವಾಗ ಮಕ್ಕಳಿಗೆ ಸೂಕ್ತ ಆರೈಕೆ ದೊರೆಯುವುದಿಲ್ಲ. ಆದರೂ ತಾಯಂದಿರು ತಮ್ಮ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಶಕ್ತಿ ಮೀರಿ ಶ್ರಮಿಸುತ್ತಾರೆ. ಈ ವಿಡಿಯೋ ಕೂಡ ಬಡತನದ ಬೇಗೆಯಲ್ಲೂ ಮಗು ಮೇಲಿನ ತಾಯಿಯ ಮಮಕಾರವನ್ನು ತೆರೆದಿಟ್ಟಿದೆ.