ಸಮಗ್ರ ನ್ಯೂಸ್: ಸುಳ್ಯದ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿ ಬ್ಯಾಂಕಿಂದ ಹಣ ತೆಗೆದುಕೊಡುದಾಗಿ ಹೇಳಿ ವಂಚಿಸಲು ಯತ್ನಿಸಿರುವ ಬಗ್ಗೆ ಆ. 26 ರಂದು ನಡೆದಿದೆ.
ಟೈಲರ್ ವೃತ್ತಿ ನಡೆಸುತ್ತಿದ್ದ ಅಪ್ಪಯ್ಯ ನೀರಬಿದಿರೆ ಎಂಬವರಿಗೆ ಇಂದು(ಆ. 26) ಬೆಳಗ್ಗೆ ಮಲೆಯಾಳಂ ಮಾತನಾಡುವ ಅಪರಿಚಿತರೊಬ್ಬರು ಬಂದು ನನಗೆ ನಿಮ್ಮ ಪರಿಚಯವಿದೆ. ನಾನು ನಿಮ್ಮ ಬಳಿ ಹಿಂದೆಯೂ ಬಂದು ಮಾತನಾಡಿಸಿದ್ದೇನೆ. ನಿಮ್ಮ ಮಗಳನ್ನು ಮದುವೆ ಮಾಡಿಕೊಟ್ಟ ಕಡೆಯವರು ನನಗೆ ಸಂಬಧಿಕರು ಎಂದು ಹೇಳಿ, ಇವತ್ತು ನನಗೆ ಬ್ಯಾಂಕಿಗೆ 1.5 ಲಕ್ಷ ಪ್ರಧಾನಿ ಮೋದಿಯವರ ಹಣ ಬಿಡುಗಡೆಯಾಗಲಿದೆ. ಈಗ ನಾನು ತುರ್ತಾಗಿ 7.5 ಸಾವಿರ ಬ್ಯಾಂಕಿಗೆ ಪಾವತಿ ಮಾಡಬೇಕು ಎಂದು ಹೇಳಿ ನಿಮ್ಮ ಬಳಿ ಹಣ ಇದ್ದರೆ ಈಗ ನನಗೆ 7.5 ಸಾವಿರ ಕೊಡಿ ಎಂದು ಬೇಡಿಕೆ ಇಟ್ಟಿದ್ದಾನೆ. ಬ್ಯಾಂಕಿನಿಂದ ಹಣ ಬಿಡುಗಡೆಯಾದ ಕೂಡಲೇ ನಿಮಗೆ ಹಿಂತಿರುಗಿಸುತ್ತೇನೆ ಎಂದು ಹೇಳಿರುವುದಲ್ಲದೆ, ನಾನು ಕೆನರಾ ಬ್ಯಾಂಕ್ ಉದ್ಯೋಗಿ ಎಂದು ಸಹ ನಂಬಿಸಲು ಪ್ರಯತ್ನಿಸಿದ್ದಾನೆ.
ಆತನ ಮಾತಿನಲ್ಲಿ ನಂಬಿಕೆ ಬಾರದೆ ತಕ್ಷಣ ಅವರ ಮಗಳಿಗೆ ದೂರವಾಣಿ ಕರೆ ಮಾಡಿ ಗಂಡನ ಸಂಬಂಧಿಕರು ಕೆನರಾ ಬ್ಯಾಂಕ್ ಉದ್ಯೋಗಿ ಯಾರು ಇದ್ದಾರೆ ಎಂದು ಕೇಳಿ ಬ್ಯಾಂಕ್ ಉದ್ಯೋಗಿ ಯಾರು ಇಲ್ಲ ಎಂದು ತಿಳಿದ ಅಪ್ಪಯ್ಯ ಅವರು ಮೋಸ ಹೋಗುವ ಬಗ್ಗೆ ತಿಳಿದುಕೊಂಡು, ನನ್ನ ಬಳಿ ಹಣ ಇಲ್ಲ. ನಿಮ್ಮ ಪರಿಚಯ ನನಗೆ ಇಲ್ಲವೆಂದು ಹೇಳಿದಾಗ ಹಣ ಸಿಗುವುದಿಲ್ಲವೆಂದು ಮನಗಂಡ ವಂಚಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಈ ಅಪರಿಚಿತ ವ್ಯಕ್ತಿ ಯಾರು ಎಂದು ಕಾಂಪ್ಲೆಕ್ಸ್ ನ ಸಿ.ಸಿ. ಫೂಟೇಜ್ ವೀಕ್ಷಿಸಿದಾಗ ಅವನ ಪೂರ್ಣ ಚಿತ್ರ ಕಾಣಿಸಲಿಲ್ಲ. ಆತ ನೀಳ ಕಾಯದ ಕಪ್ಪು ಬಣ್ಣ ಹೊಂದಿದ್ದು ಮಲಯಾಳಂ ಭಾಷೆಯಲ್ಲಿ ಮಾತನಾಡುವ ವ್ಯಕ್ತಿಯಾಗಿದ್ದಾನೆ.