ಸಮಗ್ರ ನ್ಯೂಸ್: ಕಾವೇರಿ ನೀರಿನ ವಿಚಾರದ ಕುರಿತಂತೆ ಕಾನೂನಾತ್ಮಕ ಹೋರಾಟಕ್ಕೆ ಸರ್ವಪಕ್ಷಗಳು ಬೆಂಬಲ ಸೂಚಿಸಿ, ರಾಜ್ಯ ಸರ್ಕಾರಕ್ಕೆ ಬಲ ತುಂಬಿವೆ.ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ಜಲ ವಿವಾದಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಸಭೆ ನಡೆಯಿತು.
ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್ ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್ 10 ರಂದು 1,5000 ಕ್ಯೂಸೆಕ್ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10,000 ಕ್ಯೂಸೆಕ್‌ಗೆ ಇಳಿಕೆ ಮಾಡಿದೆ. ಇದರಿಂದ ಅಸಮಾಧಾನಗೊಂಡ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ತಿಳಿಸಿದ್ದರು.
ಬಳಿಕ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯ್ಲಿ, ಸಂಸದರಾದ ಸುಮಲತಾ, ಜಗ್ಗೇಶ್, ಡಾ. ಹನುಮಂತಯ್ಯ, ಮುನಿಸ್ವಾಮಿ, ಜಿ.ಎಂ. ಸಿದ್ದೇಶ್ವರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೊದಲಾದವರು ರಾಜ್ಯದ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹಾಗೂ ಸಂಕಷ್ಟ ಹಂಚಿಕೆ ಸೂತ್ರವನ್ನು ಇನ್ನಷ್ಟು ನಿರ್ದಿಷ್ಟಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹೆಚ್.ಡಿ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ, ವೀರಪ್ಪಮೊಯ್ಲಿ, ಸಚಿವರಾದ ಚೆಲುವರಾಯಸ್ವಾಮಿ, ಡಾ, ಜಿ. ಪರಮೇಶ್ವರ್ P.ಜೆ ಜಾರ್ಜ್, ಕೃಷ್ಣಭೈರೇಗೌಡ, ಹೆಚ್.ಕೆ ಪಾಟೀಲ್ ಸೇರಿದಂತೆ ಹಲವು ಸಚಿವರು, ವಿವಿಧ ಪಕ್ಷಗಳ ಮುಖಂಡರು, ಸಂಸದರು ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಾಕೇಶ್‌ಸಿಂಗ್, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ವಕೀಲರಾದ ಮೋಹನ್ ಕಾತರಕಿ ಸೇರಿದಂತೆ ಕಾನೂನು ತಜ್ಞರು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.