ಸಮಗ್ರ ನ್ಯೂಸ್:”ಹಾಸ್ಯ ಮನಸ್ಸುಗಳನ್ನು ಬೆಸೆಯುವುದರೊಂದಿಗೆ, ನೋವುಗಳನ್ನು ಮರೆಸುವ ದಿವ್ಯೌಷಧಿಯೂ ಹೌದು. ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಎಲ್ಲೆಡೆಯೂ ನಾನು ಸಂತೋಷವನ್ನು ಮಾತ್ರ ಕಂಡೆ. ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ ಯಾರೂ ನೋವುಂಟು ಮಾಡಿದ್ದನ್ನು ನಾನು ಕಂಡೇ ಇಲ್ಲ. ಹುಟ್ಟಿದೂರನ್ನು ಬಿಟ್ಟು ಮಂಗಳೂರಿಗೆ ಬಂದ ಮೇಲೆ ನನ್ನನ್ನು ಇಲ್ಲಿನವರು ಮುಕ್ತವಾಗಿ ಸ್ವೀಕರಿಸಿ, ತುಂಬು ಪ್ರೀತಿಯನ್ನು ಕೊಟ್ಟಿದ್ದಾರೆ. ಹಾಗಿರುವಾಗ ನಾನು ಹಾಸ್ಯ ಬರಹಗಳನ್ನಲ್ಲದೆ ಇನ್ನೇನನ್ನು ತಾನೇ ಬರೆಯಲಿ?” ಎಂದು ಪ್ರಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರು ಹೇಳಿದರು.
ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಘಟಕವು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದೊಂದಿಗೆ ಜಂಟಿಯಾಗಿ ಆಯೋಜಿಸಿದ “ಕಡಲ ಕಿನಾರೆಯಲ್ಲಿ ವರ್ಷವೈಭವ, ಖ್ಯಾತ ಸಾಹಿತಿ ಭುವನೇಶ್ವರಿ ಹೆಗಡೆಯವರೊಂದಿಗೆ ಸಂವಾದ ಮತ್ತು ಕವಿಗೋಷ್ಠಿ” ಕಾರ್ಯಕ್ರಮದಲ್ಲಿ ಸಂವಾದಕಾರರಾದ ಡಾ. ಮೀನಾಕ್ಷಿ ರಾಮಚಂದ್ರರವರ ಜತೆಗೆ ಅವರು ಸಂವಾದ ನಡೆಸಲಾಯಿತು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಕಾರ್ಯದರ್ಶಿ ಡಾ. ಮುರಲಿ ಮೋಹನ ಚೂಂತಾರುರವರ ಕಡಲ ಕಿನಾರೆಯ ಪ್ರಕೃತಿ ರಮಣೀಯ ಪರಿಸರದ “ಕನಸು” ಮನೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣಕರರು ವಹಿಸಿದ್ದರು. ಸಾಹಿತಿಗಳ ಹಾಗೂ ಆಪ್ತ ವಲಯದ ಈ ಕಾರ್ಯಕ್ರಮ ಬಹಳಷ್ಟು ಆಹ್ಲಾದಕಾರಿ ಹಾಗೂ ಚೇತೋಹಾರಿಯಾಗಿತ್ತು.
ಸಂವಾದದ ಅನಂತರ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ, ಎಸ್. ಕೆ. ಗೋಪಾಲಕೃಷ್ಣ ಭಟ್, ಬದ್ರುದ್ದೀನ್ ಕೂಳೂರು, ರಘು ಇಡ್ಕಿದು, ಸಾವಿತ್ರಿ ರಮೇಶ್ ಭಟ್, ರವಿರಾಜ್, ಸುಬ್ರಾಯ ಭಟ್, ರೇಖಾ ಶಂಕರ್, ಗಣೇಶ್ ಪ್ರಸಾದ್ ಜೀ, ಡಾ. ಮೀನಾಕ್ಷಿ ರಾಮಚಂದ್ರ ಭಾಗವಹಿಸಿದ್ದರು.
ಸಂವಾದದಲ್ಲಿ ಪ್ರಸಿದ್ಧ ಸಾಹಿತಿ ಕೇಶವ ಕುಡ್ಲ, ಗಣೇಶ ಪ್ರಸಾದ ಜೀ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಭಾರವಾಹಿ ನ್ಯಾಯವಾದಿ ಗಣೇಶ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚೂಂತಾರು ಸರೋಜಿನಿ ಭಟ್ ಪರಿಷತ್ತಿನ ಭಾರವಾಹಿಗಳೂ, ಡಾ. ಮುರಲಿ ಮೋಹನ ಚೂಂತಾರು ಸ್ವಾಗತಿಸಿ, ಉಷಾ ಪ್ರಸಾದ್ ಜೀ ಪ್ರಾರ್ಥಿಸಿ, ಪದಾಧಿಕಾರಿ ರಘು ಇಡ್ಕಿದು ರವರು ಪರಿಚಯಿಸಿ, ಕಾರ್ಯದರ್ಶಿ ಗಣೇಶ ಪ್ರಸಾದ್ ಜೀ ಹಾಗೂ ಪದಾಧಿಕಾರಿ ರತ್ನಾವತಿ ಬೈಕಾಡಿ ನಿರೂಪಿಸಿದರು.