ಸಮಗ್ರ ನ್ಯೂಸ್: ಪಶ್ಚಿಮ ಘಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆಯು ಗಾಜಿನ ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿದೆ. ಮಳೆ ಬೀಳಲು ಆರಂಭಿಸಿದರೆ ಸಾಕು ಕಾಫಿನಾಡಿಗೆ ಪ್ರವಾಸ ಹೊರಡುವುದು ಸಹಜ. ಆದರೆ, ಹೀಗೆ ಹೊರಟವರು ಬಹುತೇಕರು ಮುಳ್ಳಯ್ಯನಗರಿಗೆ ಹೋಗುತ್ತಾರೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆ ಅಂತಹದ್ದೇ ಇನ್ನೊಂದು ಬ್ಯೂಟಿಫುಲ್ ಪ್ರವಾಸಿ ತಾಣವನ್ನು ಪರಿಚಯಿಸುವ ಕೆಲಸಕ್ಕೆ ಮುಂದಾಗಿದೆ. ಅದುವೇ ಪಶ್ಚಿಮ ಘಟ್ಟದ ಆರಂಭಿಕ ಪಾಯಿಂಟ್ ಎನಿಸಿಕೊಂಡಿರುವ “ರಾಣಿ ಝರಿ ವೀವ್ ಪಾಯಿಂಟ್”.
ರಾಣಿ ಝರಿಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ, ಅದರ ಕೆಳಭಾಗವು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ. ಹಸಿರ ಪ್ರಕೃತಿಯನ್ನು ಹೊದ್ದು ಮಲಗಿದಂತೆ ಕಾಣುವ ಈ ರಾಣಿ ಝರಿ ಪರ್ವತದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಲ್ಲೇ ಹತ್ತಿರದಲ್ಲಿರುವ ಬಲ್ಲಾಳರಾಯನ ದುರ್ಗಾ ಕೋಟೆಗೆ ತೆರಳುತ್ತಾರೆ. ಆದರೂ ಇತ್ತ ಕಡೆ ಬರೋ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ.
ಹೀಗಾಗಿ ರಾಣಿ ಝರಿ ವೀವ್ ಪಾಯಿಂಟ್ ಅನ್ನು ಪ್ರವಾಸಿ ತಾಣವಾಗಿ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಗಾಜಿನ ಸೇತುವೆಯನ್ನು ನಿರ್ಮಿಸಲು ಮುಂದಾಗಿದೆ. ಈಗಾಗಲೇ ಇದಕ್ಕೆ ಬೇಕಾದ ಅಧ್ಯಯನವು ಆರಂಭಗೊಂಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಕೊಡಗಿನಲ್ಲಿ ಖಾಸಗಿಯಾಗಿ ಗಾಜಿನ ಸೇತುವೆ ನಿರ್ಮಿಸಲಾಗಿದೆ. ಜನರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ. ರಾಣಿ ಝರಿಯಲ್ಲಿ ಇದು ಸಾಧ್ಯವಾದರೆ ರಾಜ್ಯದಲ್ಲಿಯೇ ಸರಕಾರಿ ಇಲಾಖೆ ನಿರ್ಮಿಸಿದ ಮೊದಲ ಗಾಜಿನ ಸೇತುವೆ ಇದಾಗಲಿದೆ.
ಮುಳ್ಳಯ್ಯನಗರಿಗೆ ಹೆಚ್ಚುತ್ತಿರುವ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದಲೂ ಈ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ಕೈಗೆತ್ತಿಕೊಂಡಿದೆ.