ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗುವ ಭಾರತೀಯ ಆಹಾರ ಇಲಾಖೆ ನೀಡುವ ಅಕ್ಕಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗೋಲ್ ಮಾಲ್. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸುಮಾರು 1,32,36,000ರೂ ಮೌಲ್ಯದ 3892.95.450 ಕ್ವಿಂಟಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮ(Karnataka Food and Supplies Corporation)ದ ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹಾಂಡ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಂಟ್ಬಾಳ ತಾಲೂಕಿನ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಡಿಪೋದ ಮುಂಭಾಗದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಇಡಲಾಗಿದ್ದ ಅಕ್ಕಿಯ ಲೆಕ್ಕಾಚಾರದಲ್ಲಿ ಕೊರತೆ ಕಂಡು ಬಂದಿರುವ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮೇಲ್ವಿಚಾರಕ ವಿಜಯ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಶಕ್ಕೆ ಪಡೆದಿದ್ದಾರೆ. ಉಳಿದಂತೆ ವಿಜಯ್ ನೀಡಿದ ಮಾಹಿತಿ ಆಧರಿಸಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸುವ ಬಗ್ಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪಡಿತರ ಚೀಟಿ ದಾರರಿಗೆ ವಿತರಿಸುವ ಅಕ್ಕಿಯಲ್ಲಿ ಅವ್ಯವಹಾರವಾಗಿರುವ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದಾರೆ. ಬಂಟ್ವಾಳ ತಾಲೂಕಿನ ಪಡಿತರದಾರರಿಗೆ ವಿತರಿಸುವ ಭಾರತೀಯ ಆಹಾರ ನಿಗಮದಿಂದ ಸರಬರಾಜಾದ ಪಡಿತರ ಅಕ್ಕಿಯು ದುರುಪಯೋಗ ಮತ್ತು ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಮಾನಿ ಇದೆ. ಈ ಕುರಿತು ನನಗೆ ದೂರುಗಳು ಬಂದಿರುತ್ತವೆ. ಆದುದರಿಂದ ತಾವು ತಕ್ಷಣ ಈ ಕುರಿತು ವೈಯಕ್ತಿಕ ಗಮನ ಹರಿಸಿ ಅಕ್ಕಿ ದಾಸ್ತಾನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.