ಸಮಗ್ರ ನ್ಯೂಸ್: ಸಮುದಾಯ ಆರೋಗ್ಯ ಅಧಿಕಾರಿ ಕೆ.ಕೆ.ಭವ್ಯ ಅವರು ಮಗುವಿನ ಆರೋಗ್ಯ ತಪಾಸಣೆಗಾಗಿ ಭೇಟಿ ನೀಡಿ ತೆರಳುವಾಗ ಮನೆಯ ಸಾಕು ನಾಯಿ ದಾಳಿ ಮಾಡಿದ ಘಟನೆ ಪಾರಾಣೆ ಗ್ರಾಮದಲ್ಲಿ ಆ.16 ರಂದು ನಡೆದಿದೆ.
ಬೆಳತಂಡ ಮಾಚಯ್ಯ ರವರ ಮನೆಯ ಮಗುವಿಗೆ ಆರೋಗ್ಯ ತಪಾಸಣೆ ಮಾಡಿ ತೆರಳುವಾಗ ಅವರ ಸಾಕು ನಾಯಿ ಆರೋಗ್ಯ ಅಧಿಕಾರಿಯ ದೇಹದ ಹಲವು ಭಾಗಗಳಿಗೆ ಕಚ್ಚಿ ಗಾಯಮಾಡಿದ್ದು , ಇದಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕರಾದ ಬೆಳತಂಡ ಮಾಚಯ್ಯ ಅವರ ಮೇಲೆ ಆ.16 ರಂದು ನಾಪೋಕ್ಲು ಪೊಲೀಸ್ ಠಾಣೆ ಕೊಣಂಜಗೇರಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಾರ್ವಜನಿಕರು ತಮ್ಮ ಮನೆಯ ಸಾಕು ನಾಯಿಗಳು ಯಾವುದೇ ವ್ಯಕ್ತಿಗಳ ಮೇಲೆ ದಾಳಿ ಮಾಡಿರುವ ಘಟನೆ ಕಂಡುಬಂದಲ್ಲಿ ಸಾಕು ನಾಯಿ ಮಾಲೀಕರ ಮೇಲೆ Section:- 289 IPC ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ 6 ತಿಂಗಳ ಜೈಲು ವಾಸ ಮತ್ತು ದಂಡ ವಿಧಿಸಲಾಗುವುದು. ತಮ್ಮ ಮನೆಯ ಸಮೀಪ ನಾಯಿ ದಾಳಿ ಮಾಡಿರುವ ಘಟನೆಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಕೋರುತ್ತೇವೆ,ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಕೊಡಗು ಜಿಲ್ಲಾ ಪೊಲೀಸರು ವಿಶೇಷ ಸೂಚನೆಯನ್ನು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.