ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಿಂದ ಹಾರಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸೋಮೇಶ್ವರ ಪುರಸಭಾ ಕಚೇರಿ ಬಳಿಯ ನಿವಾಸಿ ಪವನ್ ಭಟ್ (೩೦) ಆತ್ಮಹತ್ಯೆಗೈದ ಯುವಕ. ಗಣೇಶ್ ಪ್ರಸನ್ನ ಮತ್ತು ರಾಜೇಶ್ವರಿ ದಂಪತಿಯ ಹಿರಿಯ ಮಗನಾದ ಪವನ್ ಮೈಸೂರಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಎನ್ನಲಾಗಿದೆ. ಮೈಸೂರಿನಿಂದ ಬಂದ ಬಳಿಕ ನಿತ್ಯವೂ ಸೋಮೇಶ್ವರ ದೇವಸ್ಥಾನಕ್ಕೆ ಪವನ್ ಬಂದು ಹೋಗುತ್ತಿದ್ದರೆನ್ನಲಾಗಿದೆ. ಇಂದು ಸಂಜೆ 4:30ರ ಹೊತ್ತಿಗೆ ಸಮುದ್ರ ಕಿನಾರೆಗೆ ಬಂದಿದ್ದ ಪವನ್, ರುದ್ರಪಾದೆಯ ಮೇಲಿಂದ ಏಕಾಏಕಿ ಸಮುದ್ರಕ್ಕೆ ಜಿಗಿದದ್ದನ್ನ ಸ್ಥಳೀಯರು ಕಂಡಿದ್ದಾರೆ. ಪವನ್ ಹಾರಿದ್ದನ್ನು ನೋಡಿದ ಈಜು ರಕ್ಷಕರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ, ರುದ್ರಪಾದೆಯ ಕೆಳಭಾಗದಲ್ಲಿ ತೀವ್ರ ಆಳ ಇರುವುದರಿಂದ ಸುಳಿ ಇದ್ದು ಸಕಾಲದಲ್ಲಿ ರಕ್ಷಣೆ ಸಾಧ್ಯವಾಗಲಿಲ್ಲ. ಬಳಿಕ ಶವ ಅಲೆಗಳಲ್ಲಿ ತೇಲಿ ಬಂದಿದ್ದನ್ನು ಗಮನಿಸಿದ ತಂಡ ಕಡಲಿನ ಅಬ್ಬರ ಜಾಸ್ತಿ ಇದ್ದರೂ ಗೃಹ ರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ, ವೀನುಗಾರರಾದ ಸಾಗರ್, ಕರಾವಳಿ ಕಾವಲು ಪಡೆಯ ಮೋಹನ್, ಸುಜಿತ್, ಸೋಮೇಶ್ವರ ದೇವಸ್ಥಾನದ ಸಿಬ್ಬಂದಿ ವಿನಾಯಕ ಸೇರಿ ಅಲೆಗಳೊಂದಿಗೆ ಸೆಣಸಾಡಿ ಮೃತದೇಹವನ್ನ ದಡಕ್ಕೆ ಎಳೆದಿದ್ದಾರೆ.
ಮೃತ ಪವನ್ ಪ್ರತಿಭಾನ್ವಿತರಾಗಿದ್ದು ಖಿನ್ನತೆಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಪವನ್ ಸೋಮೇಶ್ವರ ಆನಂದಾಶ್ರಮ ಪ್ರೌಢಶಾಲೆಯ ಹಿಂದಿ ಪಂಡಿತರೆಂದೇ ಖ್ಯಾತರಾದ ನಿವೃತ್ತ ಅಧ್ಯಾಪಕರಾದ ಕೆ.ವಿ. ಕೃಷ್ಣ ಭಟ್ ಅವರ ಮೊಮ್ಮಗನಾಗಿದ್ದು ವಿದ್ಯಾರ್ಥಿ ದಿಸೆಯಲ್ಲೇ ಪ್ರತಿಭಾನ್ವಿತನಾಗಿದ್ದ.
.