ಸಮಗ್ರ ನ್ಯೂಸ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಒನ್ ಡೇ ಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಚೆಸ್ಟರ್ ಲೇ-ಸ್ಟ್ರೀಟ್ನ ರಿವರ್ಸೈಡ್ ಗ್ರೌಂಡ್ನಲ್ಲಿ ನಡೆದ ನಾರ್ಥಾಂಪ್ಟನ್‌ಶೈರ್ ವಿರುದ್ಧ ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಹಾಮ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಡರ್ಹಾಮ್ ಪರ ಆರಂಭಿಕನಾಗಿ ಕಣಕ್ಕಿಳಿದ ಗರ್ಹಾಮ್ ಕ್ಲಾರ್ಕ್ (13) ಬೇಗನೆ ನಿರ್ಗಮಿಸಿದರೆ, ಅಲೆಕ್ಸ್ ಲೀಸ್ 34 ರನ್ ಬಾರಿಸಿದರು. ಆದರೆ ಅನುಭವಿ ವೇಗಿ ಲ್ಯೂಕ್ ಪ್ರಾಕ್ಟರ್ ಎಸೆತಗಳನ್ನು ಎದುರಿಸುವಲ್ಲಿ ತಡಕಾಡಿದ ಡರ್ಹಾಮ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಬುಶ್ನೆಲ್ (32) ಹಾಗೂ ಟ್ರೆವಾಸ್ಕಿಸ್ (37) ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಇದಾಗ್ಯೂ 43.2 ಓವರ್ಗಳಲ್ಲಿ 198 ರನ್ಗಳಿಸುವಷ್ಟರಲ್ಲಿ ಡರ್ಹಾಮ್ ತಂಡ ಸರ್ವಪತನ ಕಂಡಿತು.
199 ರನ್ಗಳ ಸುಲಭ ಗುರಿ ಪಡೆದ ನಾರ್ಥಾಂಪ್ಟನ್‌ಶೈರ್ ಪರ ಪೃಥ್ವಿ ಶಾ ಹಾಗೂ ಎಮಿಲಿಯೋ ಗೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್ಗೆ 57 ರನ್ ಕಲೆಹಾಕಿದ ಬಳಿಕ ಎಮಿಲಿಯೋ (17) ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಮುಂದುವರೆಸಿದ ಪೃಥ್ವಿ ಶಾ ತಮ್ಮ ಬ್ಯಾಟಿಂಗ್ ಪವರ್ ತೆರೆದಿಟ್ಟರು.
ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಪ್ರದರ್ಶಿಸಿದ ಪೃಥ್ವಿ ಶಾ ಡರ್ಹಾಮ್ ಬೌಲರ್ಗಳನ್ನು ಮನಸೊ ಇಚ್ಛೆ ದಂಡಿಸಿದರು. ಅಲ್ಲದೆ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.
ಇತ್ತ ರಾಬ್ ಕಿಯೋಗ್ 42 ರನ್ ಬಾರಿಸುವ ಮೂಲಕ ಪೃಥ್ವಿ ಶಾಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ 76 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 7 ಭರ್ಜರಿ ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ ಅಜೇಯ 125 ರನ್ ಬಾರಿಸಿದರು. ಈ ಮೂಲಕ ಕೇವಲ 25.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಚೇಸ್ ಮಾಡಿ ನಾರ್ಥಾಂಪ್ಟನ್‌ಶೈರ್ ತಂಡವು 6 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಒನ್ ಡೇ ಕಪ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಪೃಥ್ವಿ ಶಾ ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. 153 ಎಸೆತಗಳಲ್ಲಿ 244 ರನ್ ಬಾರಿಸಿದ್ದರು. ಈ ಮೂಲಕರ ಒನ್ ಡೇ ಕಪ್ ಅತ್ಯಧಿಕ ವೈಯಕ್ತಿಕ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.
ಇದೀಗ 125 ರನ್ ಸಿಡಿಸುವ ಮೂಲಕ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಈ ಮೂಲಕ ಕೇವಲ 4 ಪಂದ್ಯಗಳಲ್ಲಿ ಒಟ್ಟು 429 ರನ್ ಬಾರಿಸಿ ಈ ಬಾರಿಯ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ.