ಸಮಗ್ರ ನ್ಯೂಸ್:ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾದ ಚೆನ್ನೆಮಣೆ ಆಟ ಇಂದು ನಶಿಸಿ ಹೋಗುವ ಹಂತದಲ್ಲಿದೆ. ಚೆನ್ನೆಮಣೆ ಆಟದ ಬಗ್ಗೆ ಹಿರಿಯರು, ಪೋಷಕರು ಇಂದಿನ ಮಕ್ಕಳಿಗೆ ತಿಳಿಸುವ ಜೊತೆಗೆ ಆಟವನ್ನು ಕಲಿಸುವ ಮೂಲಕ ಚೆನ್ನೆಮಣೆ ಆಟದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಸರಕಾರಿ ನೌಕರರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಹೇಳಿದರು.
ಅವರು ಶನಿವಾರ ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಸುಳ್ಯ ತಾಲೂಕು ಶಾಲಾ ಶಿಕ್ಷಣ ಇಲಾಖೆ, ಸಿ.ಸಿ.ಆರ್.ಟಿ. ಗ್ರೂಪ್ ಸುಳ್ಯ ಮತ್ತು ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ತಾಲೂಕು ಮಟ್ಟದ ಚೆನ್ನೆಮಣೆ ಆಟದ ಸ್ಪರ್ಧೆ ಉದ್ಘಾಟಿಸಿದರು. ಹಿಂದಿನ ಕಾಲದಲ್ಲಿ ಭತ್ತದ ಬೇಸಾದ ವಿರಾದ ಸಮಯದಲ್ಲಿ ಚೆನ್ನೆಮಣೆ ಆಡಲಾಗುತ್ತಿತ್ತು, ಆದರೆ ಇಂದು ಹಲವರಿಗೆ ಚೆನ್ನೆಮಣೆ ಆಟ ತಿಳಿದಿಲ್ಲ. ಅದರ ಮಹತ್ವ ತಿಳಿಸುವ ಜತೆಗೆ ಆಟದ ತರಬೇತಿ ನೀಡುವ ಕೆಲಸವೂ ಆಗಬೇಕಿದೆ ಎಂದರು.
ಸಿ.ಆರ್.ಪಿ. ಮಮತಾ ಮಾತನಾಡಿ, ತುಳುನಾಡಿನ ಚೆನ್ನೆಮಣೆ ಆಟದಲ್ಲಿ ಬದುಕೇ ಇದೆ. ಮೊಬೈಲ್ ಗೀಳಿನಿಂದ ಇಂತಹ ಕ್ರೀಡೆ ಮಹತ್ವ ಎಷ್ಟೋ ಮಕ್ಕಳಿಗೆ ತಿಳಿದಿಲ್ಲ ಎಂದರು. ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಚೆನ್ನೆಮಣೆ ಆಟದಲ್ಲಿ ತುಳುನಾಡಿನ ಗೌರವ, ಸಂಸ್ಕೃತಿಯ ಪ್ರತೀಕವಿದೆ. ಈ ಆಟದಿಂದ ಮನೆಯಲ್ಲಿ ಸದಸ್ಯರ ಸಂಬಂಧ ಹೆಚ್ಚಿತ್ತು. ಇಂದು ಮಕ್ಕಳು ಮೊಬೈಲ್‌ನ ಆಟಗಳಿಗೆ ಮಾರು ಹೋಗುತ್ತಿರುವುದರಿಂದ ಜಾನಪದ ಸ್ಪರ್ಧೆಗಳಿಗೆ ಉತ್ತೇಜನ ನೀಡುವ ಅಗತ್ಯ ಇದೆ ಎಂದರು.
ಸುಳ್ಯ ನ.ಪಂ. ಸದಸ್ಯೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶೀಲಾವತಿ ಮಾದವ, ಚಿಕ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಎಣ್ಮೂರು, ನಿವೃತ್ತ ಶಿಕ್ಷಣ ಸಂಯೋಜಕ ಕೇಶವ, ಸಿಸಿಆರ್‌ಟಿ ಸುಳ್ಯ ತಾಲೂಕು ಘಟಕ ಅಧ್ಯಕ್ಷ ಚಿನ್ನಪ್ಪ ಗೌಡ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ಸ್ವಾಗತಿಸಿದರು. ಶಿಕ್ಷಕ ಉಣ್ಣಿಕೃಷ್ಣನ್ ವಂದಿಸಿದರು. ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆಗಳಿಂದ ಹಲವಾರು ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.