ಸಮಗ್ರ ನ್ಯೂಸ್: ಗೋ ರಕ್ಷಣೆ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಡಿಸಿ ಮಂಡ್ಯದ ಇದ್ರೀಸ್ ಪಾಷಾ ಎಂಬವರನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿಯನ್ನ ಬಂಧಿಸಲಾಗಿದೆ. ನಗರದ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ.
ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈ ಕಾಯ್ದೆಯಡಿ ಒಂದು ವರ್ಷ ಜಾಮೀನು ಸಿಗದ ಕಾರಣ ಮುಂದಿನ ಒಂದು ವರ್ಷಗಳ ಕಾಲ ಪುನೀತ್ ಕೆರೆಹಳ್ಳಿಗೆ ಜೈಲುವಾಸ ಖಾಯಂ ಆಗಲಿದೆ.
ಕಳೆದ ಒಂದು ತಿಂಗಳಿನಿಂದ ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿ ನೋಟಿಸ್ ನೀಡಿ ವಿವರಣೆ ಕೇಳಿದ್ದರು. ಶುಕ್ರವಾರ ತಡರಾತ್ರಿ ಸಿಸಿಬಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಕರ್ನಾಟಕ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಕಳೆದ ಕೆಲ ವರ್ಷಗಳಿಂದ ನಡೆಸಿರುವ ಸಮಾಜ ವಿರೋಧಿ ಕೃತ್ಯಗಳು, ಸಮಾಜದ ಸಾಮರಸ್ಯ ಕದಡಿದ ಪ್ರಕರಣಗಳು ಮತ್ತು ಆತನ ಅಪರಾಧ ಪ್ರಕರಣಗಳನ್ನು ಪರಿಗಣಿಸಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲತಃ ಹಾಸನ ಜಿಲ್ಲೆಯವನಾದ ಪುನೀತ್ ಕೆರೆಹಳ್ಳಿ ಸದ್ಯ ಬೆಂಗಳೂರಿನ ಜೆಪಿ ನಗರದಲ್ಲಿ ನೆಲೆಸಿದ್ದು ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಜನರನ್ನು ಬೆದರಿಸಿ ಸಮಾಜದ ಶಾಂತಿ ಕದಡಿ ಗೋ ರಕ್ಷಣೆ ಹೆಸರಿನಲ್ಲಿ ದನದ ವ್ಯಾಪಾರಿಗಳನ್ನು ಬೆದರಿಸುತ್ತಿದ್ದ ಎಂದು ಮಾಹಿತಿ ನೀಡಲಾಗಿದೆ.