ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಸರಕಾರವು ನಿರೀಕ್ಷೆಯಂತೆಯೇ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ ವಿರುದ್ಧ ಗೆಲುವು ದಾಖಲಿಸಿದೆ.
ಅವಿಶ್ವಾಸ ನಿರ್ಣಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವಾಗ ವಿರೋಧ ಪಕ್ಷಗಳು ಲೋಕಸಭೆಯಿಂದ ಸಭಾತ್ಯಾಗ ಮಾಡಿವೆ. ಇದಕ್ಕೆ ಪ್ರತಿಯಾಗಿ, “ಅವರು ನಮ್ಮನ್ನು ತೆಗಳುತ್ತಾರೆ. ಆದರೆ, ಅವರಿಗೆ ನಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ, ದೇಶದ ಜನರು ನಮ್ಮ ಸರಕಾರದ ಮೇಲೆ ನಂಬಿಕೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ದೇಶದ ಕೋಟ್ಯಂತರ ಜನರಿಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿದ್ದೇನೆ ಎಂದು ಹೇಳಿದರು.
ಮಣಿಪುರ ವಿಚಾರದಲ್ಲಿ ಪ್ರಧಾನಿ ಮಾತನಾಡಬೇಕೆಂದು ಒತ್ತಾಯಿಸಿ ವಿಪಕ್ಷಗಳ ಒಕ್ಕೂಟ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಸಂಸತ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಕುರಿತಂತೆ ಮೂರನೇ ದಿನದ ಚರ್ಚೆಯು ಗಂಭೀರ ಸ್ವರೂಪ ಪಡೆದಿದೆ. ಪ್ರತಿಪಕ್ಷಗಳ ನಾಯಕರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರೆ, ಕೇಂದ್ರದ ನಾಯಕರು ತಿರುಗೇಟು ನೀಡುತ್ತಿದ್ದಾರೆ.