ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಕೊಂಚ ಸಂಪೂರ್ಣ ಕಡಿಮೆಯಾಗದೇ ಲಾಕ್ ಡೌನ್ ವಿನಾಯಿತಿ ನೀಡುವುದಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಅವರು ಎರಡೇ ದಿನದಲ್ಲಿ ಎರಡೆರಡು ಬಾರಿ ಮಾರ್ಗಸೂಚಿ ಬದಲಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗಳಿಗೆಗೊಂದು ಆದೇಶ ಹೊರತರುತ್ತಿರುವ ಜಿಲ್ಲಾಡಳಿತದ ಕ್ರಮದಿಂದಾಗಿ ಪ್ರಭಾವಿಗಳ ಒತ್ತಡಕ್ಕೆ ಡಿಸಿ ಮತ್ತು ಸಚಿವರು ಮಣಿಯುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.
ಜೂ.21 ರಂದು ಅಗತ್ಯವಸ್ತುಗಳ ಖರೀದಿಗೆ ಡಿಸಿ ಮಧ್ಯಾಹ್ನ 1 ಗಂಟೆವರೆಗೆ ಸಮಯ ವಿಸ್ತರಿಸಿ ಆದೇಶಿಸಿದ್ದರು. ಅದಾದ ಬಳಿಕ ಜೂ.22 ರಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಧ್ಯಾಹ್ನ 2 ಗಂಟೆವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದರು. ಬಳಿಕ ಸಂಜೆ ವೇಳೆಗೆ ಬಸ್ ಓಡಾಟಕ್ಕೆ ಮಧ್ಯಾಹ್ನದವರೆಗೆ ಅನುಮತಿ ನೀಡಿ ಆದೇಶಿಸಿದ್ದಾರೆ.
ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಜಿದ್ದಿಗೆ ಬಿದ್ದಂತೆ ರೂಲ್ಸ್ ಚೇಂಜ್ ಮಾಡ್ತಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ.
ಯಾರಿಗಾಗಿ ಅನ್ ಲಾಕ್? ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ತೀರಾ ಕಡಿಮೆಯೇನು ಆಗಿಲ್ಲ. ಸಾವಿನ ಸಂಖ್ಯೆಯಲ್ಲೂ ಅದೇ ಸ್ಥಿರತೆ ಕಾಣುತ್ತಿದೆ. ಅದಾಗ್ಯೂ ಜಿಲ್ಲಾಧಿಕಾರಿಗಳು ದಿನಕ್ಕೆ 10ಸಾವಿರದಂತೆ ಕೋವಿಡ್ ಟೆಸ್ಟ್ ನಡೆಸುವುದಾಗಿಯೂ ಹೇಳಿದ್ದಾರೆ. ಇವೆಲ್ಲವುಗಳ ನಡುವೆ ಬಹುತೇಕ ಎಲ್ಲಾ ವಲಯಕ್ಕೆ ವಿನಾಯಿತಿ ನೀಡಿ ಬಸ್ ಗಳ ಓಡಾಟಕ್ಕೂ ಅನುಮತಿ ನೀಡಿಯರುವುದರಿಂದ ಕೋವಿಡ್ ಮತ್ತೆ ಉಲ್ಬಣಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಲಾಕ್ ಡೌನ್ ತೆರವಿಗೆ ಹಲವರ ಒತ್ತಡ ಇದ್ದರೂ ಆ ವರ್ಗಗಳ ಮುಖಂಡರ ಜೊತೆ ಮಾತುಕತೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬಹುದಾಗಿತ್ತು. ಆದರೆ ಸಚಿವರು ಮತ್ತು ಡಿಸಿ ಗಂಟೆಗೊಮ್ಮೆ ಹೊಸ ಹೊಸ ಮಾರ್ಗಸೂಚಿ ಪ್ರಕಟ ಮಾಡುತ್ತಿರುವುದು ಜಿಲ್ಲಾಡಳಿತ ಮತ್ತು ಸಚಿವರ ಸಮನ್ವಯದ ಕೊರತೆಯೇ ಅಥವಾ ಸಚಿವರ ಹೇಳಿಕೆಯಿಂದ ಜಿಲ್ಲಾಡಳಿತ ದಿಕ್ಕು ತಪ್ಪಿತಾ ಎಂಬ ಅನುಮಾನ ಜನರದ್ದು.
ಈ ನಡುವೆ ಮುಂದಿನ ನಡೆ ಏನೆಂಬುದು ತಿಳಿಯದೇ ಜನತೆ ಮಾತ್ರ ಫುಲ್ ಕನ್ ಪ್ಯೂಸ್ ಆಗಿರುವುದು ಸುಳ್ಳಲ್ಲ.