ಸಮಗ್ರ ನ್ಯೂಸ್: ಇನ್ಮುಂದೆ ತಿರುಪತಿ ತಿಮ್ಮಪ್ಪನ ಲಡ್ಡಿ(Tirupati laddus)ನಲ್ಲಿ ಕರ್ನಾಟಕದ ನಂದಿನಿ ತುಪ್ಪದ (Nandini ghee) ಘಮ ಮರೆಯಾಗಲಿದೆ. ಸುಮಾರು 50 ವರ್ಷಗಳ ನಂತರ ತಿರುಪತಿ ತಿರುಮಲ ಟ್ರಸ್ಟ್ (TTD) ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತುಪ್ಪ ಖರೀದಿಸುವುದನ್ನು ಸ್ಥಗಿತಗೊಳಿಸಿದೆ. ಕೆಎಂಎಫ್ ನೀಡಿರುವ ಬೆಲೆಯನ್ನು ಒಪ್ಪಿಕೊಳ್ಳದ ಟಿಟಿಡಿ ಮತ್ತೊಂದು ಕಂಪನಿಯೊಂದಿಗೆ ತುಪ್ಪ ಖರೀದಿಸಲು ಮುಂದಾಗಿರುವುದು ಬಹುತೇಕ ಪಕ್ಕಾ ಆಗಿದೆ.
ಆಗಸ್ಟ್ 1 ರಿಂದ ಹಾಲಿನ ಸಂಗ್ರಹಣೆ ಬೆಲೆ ಹೆಚ್ಚಾಗುವುದರಿಂದ ತುಪ್ಪ ಖರೀದಿಸಲು ಹೆಚ್ಚಿನ ಬೆಲೆಯ ಬೇಡಿಕೆ ಇಡಲಾಗಿತ್ತು. ಆದರೆ ಟಿಟಿಡಿ ಇ-ಪ್ರೊಕ್ಯೂರ್‍ಮೆಂಟ್ ಸೈಟ್ ಮೂಲಕ ಕಡಿಮೆ ಬೆಲೆಯನ್ನು ನಮೂದಿಸಿದ ಕಂಪನಿಯನ್ನು ಆಯ್ಕೆ ಮಾಡಿದೆ. ಗುಣಮಟ್ಟದಿಂದಾಗಿ ಕೆಎಂಎಫ್ ತುಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು, ಕಡಿಮೆ ಬೆಲೆಗೆ ಬಿಡ್ ಮಾಡುವ ಕಂಪನಿಯೊಂದಿಗೆ ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ತಿಳಿದಿದೆ. ಕೆಎಂಎಫ್ ತುಪ್ಪದಿಂದ ಲಡ್ಡುಗಳು ರುಚಿಯಾಗಿವೆ ಎಂದು ಟಿಟಿಡಿ ಹಲವು ಬಾರಿ ಹೇಳಿದ್ದರೂ ಈಗ ಒಪ್ಪಂದ ಮುಕ್ತಾಯವಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದಾರೆ.
ಭಾರತದ ಶ್ರೀಮಂತ ದೇಗುಲಗಳಲ್ಲೊಂದಾದ ತಿರುಪತಿಯ ದರ್ಶನಕ್ಕೆ ದೇಶ-ವಿದೇಶದಿಂದ ಭಕ್ತರು ಭೇಟಿ ನೀಡುತ್ತಾರೆ. ತಿಮ್ಮಪ್ಪನ ಸನ್ನಿಧಿ ಎಷ್ಟು ವೈಶಿಷ್ಯವೋ ಅಷ್ಟೇ ಏಳುಕೊಂಡಲವಾಡನ ದರ್ಶನ ಪಡೆದ ಬಳಿಕ ಕೊಡುವ ಲಡ್ಡು ಕೂಡ ವಿಶ್ವದಾದ್ಯಂತ ಪ್ರಸಿದ್ಧ. ತಿರುಪತಿಯಲ್ಲಿ ಪೂಜೆ, ದರ್ಶನ ಪಡೆದ ಬಳಿಕ ಲಡ್ಡು ನೀಡಲಾಗುತ್ತದೆ ಪೂಜೆಯ ಬಳಿಕ ಭಕ್ತರು ಸರತಿ ಸಾಲಲ್ಲಿ ನಿಂತು ತಿರುಪತಿ ಲಡ್ಡು ಪಡೆಯುತ್ತಾರೆ.
ತಿಮ್ಮಪ್ಪನ ಸನ್ನಿಧಿಗೆ ತೆರಳಿದ ಬಳಿಕ ಲಡ್ಡು ಪಡೆದರೆ ಸಾರ್ಥಕ ಭಾವವೂ ಮೂಡುತ್ತದೆ. ತಿಮ್ಮಪ್ಪನ ದರ್ಶನದ ಬಳಿಕ ಪ್ರಸಾದ ರೂಪದಲ್ಲಿ ನೀಡುವ ಲಡ್ಡುಗಳಿಗೆ ಭಕ್ತಗಣ ಕ್ಯೂ ನಿಂತಿರುತ್ತದೆ. ಲಡ್ಡು ಪಡೆಯಲು 29 ಹೆಚ್ಚು ಕೌಂಟರ್ಗಳಿದ್ದು ಪ್ರತಿದಿನವೂ ಭಕ್ತರಿಂದ ತುಂಬಿ ತುಳುಕುತ್ತಾ ಇರುತ್ತದೆ. ತಿರುಪತಿಯಲ್ಲಿ ದಿನವೊಂದಕ್ಕೆ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಲಡ್ಡುಗಳು ತಯಾರಾಗಿ ವಿತರಿಸಲ್ಪಡುತ್ತದೆ. ದರ್ಶನಕ್ಕೆ ಬಂದ ಭಕ್ತರು ಕ್ಯೂ ನಿಂತು ಲಡ್ಡು ಕೊಂಡೊಯ್ಯುತ್ತಾರೆ. ಒಂದೂವರೆ ಲಕ್ಷ ಲಡ್ಡುಗಳಲ್ಲಿ ಸರಾಸರಿ ಓರ್ವ ಭಕ್ತನೇ ಸರಾಸರಿ 4 ಲಡ್ಡು ಕೊಂಡೊಯ್ಯುತ್ತಾನೆ ಎಂದು ಅಂದಾಜಿಸಲಾಗಿದೆ. ಆದರೆ ಇನ್ಮುಂದೆ ತಿರುಪತಿ ಲಡ್ಡಿನಲ್ಲಿ ಕನ್ನಡದ ಕಂಪಿನ ನಂದಿನಿ ತುಪ್ಪ ಇರೋದಿಲ್ಲ ಅನ್ನೋದು ಬೇಸರದ ಸಂಗತಿಯಾಗಿದೆ.