ಸಮಗ್ರ ನ್ಯೂಸ್: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಸದ್ಯ ಬಂಧನದಲ್ಲಿರುವ ಲಷ್ಕರ್ ಎ ತೋಯ್ಬದ ಸದಸ್ಯ ಅಫ್ಸರ್ ಪಾಷಾ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಶಾರಿಖ್ ಹಾಗೂ ಪಾಷಾನಿಗೆ ಸಂಬಂಧ ಇರುವುದು ತನಿಖೆ ವೇಳೆ ಬಯಲಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿಯಿಂದ ಬಂದಿದ್ದ ಜೀವ ಬೆದರಿಕೆ ಕರೆ ಪ್ರಕರಣದಲ್ಲಿ ಪಾಷನ್ನು ಜುಲೈ ೧೪ ರಂದು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ತನಿಖೆ ವೇಳೆ ಪಾಷಾ ಈ ಶಾಕಿಂಗ್ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಶಾರಿಖ್‌ಗೆ ಪಾಷ ಕರ್ನಾಟಕದ ಜೈಲೊಂದರಲ್ಲೇ ಸ್ಪೋಟದ ತರಬೇತಿ ನೀಡಿದ್ದಾನೆ. ಅಲ್ಲದೇ ಮುಸ್ಲಿಂ ಮೂಲಭೂತ ವಿಚಾರಗಳನ್ನು ಬೋಧನೆ ಮಾಡಿದ್ದಾನೆ ಎಂಬ ವಿಚಾರವನ್ನು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಹ ಕೈದಿಗಳ ಮೇಲೆ ಇಸ್ಲಾಂ ಮೂಲಭೂತ ವಿಚಾರಗಳನ್ನು ಹೇರುವುದು ಹಾಗೂ ಭಯೋತ್ಪಾದಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ. ಆರಂಭದಲ್ಲಿ ಈತನ ಕೈವಾಡ ಇರುವುದರ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿತ್ತು. ಆದರೆ ತನಿಖೆಯಿಂದ ಸ್ಪಷ್ಟ ವಿಚಾರಗಳು ಬಯಲಿಗೆ ಬಂದಂತಾಗಿದೆ.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಹಿಂದೆ ಪಾಷಾ ಬ್ಯಾಂಕ್ ಖಾತೆಗೆ ೫ ಲಕ್ಷ ರೂ. ವರ್ಗಾವಣೆ ಮಾಡಿತ್ತು. ಜೈಲಿನಲ್ಲಿ ಈತನ ಕೈಗೆ ಸ್ಮಾರ್ಟ್ ಫೋನ್ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪಾಷಾ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸಮಗ್ರ ವರದಿಯನ್ನು ಸಿದ್ಧಪಡಿಸಿದ್ದಾರೆ.
ಯಾರು ಈ ಅಫ್ಸರ್ ಪಾಷಾ?
ಈತ ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್ ಎ ತೊಯ್ಯಾದ ಸದಸ್ಯನಾಗಿದ್ದು, ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ (Hindalga Jail) ಬಂಧಿಯಾಗಿದ್ದ. ಹಲವು ವರ್ಷಗಳ ಹಿಂದೆಯೇ ಬಾಂಗ್ಲಾ ದೇಶದಲ್ಲಿ ಬಾಂಬ್ ತಯಾರಿಕೆ ಕುರಿತು ತರಬೇತಿ ಪಡೆದಿದ್ದಾನೆ. ೨೦೦೫ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಐಐಎಸ್ಸಿ ಮೇಲೆ ನಡೆದ ದಾಳಿ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ. ಬೆಂಗಳೂರಿನ ಮತ್ತೊಂದು ಸ್ಫೋಟವೊಂದರಲ್ಲೂ ಈತನ ಕೈವಾಡವಿದೆ ಎಂದು ಮಹಾರಾಷ್ಟ್ರದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ೨೦೧೨ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣದಲ್ಲಿ ಈತ ಅಪರಾಧಿಯಾಗಿದ್ದಾನೆ.
ಕಳೆದ ನವೆಂಬರ್‌ನಲ್ಲಿ ಆರೋಪಿ ಶಾರಿಕ್ ಕೊಂಡೊಯ್ಯುತ್ತಿದ್ದ ಕುಕ್ಕರ್ ಬಾಂಬ್ ಆಟೋದಲ್ಲಿ ಸ್ಫೋಟಗೊಂಡಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಬಾಂಬ್‌ನ್ನು ಕದ್ರಿಯ ದೇವಸ್ಥಾನದಲ್ಲಿ ಇರಿಸಲು ತೀರ್ಮಾನಿಸಲಾಗಿತ್ತು ಎಂಬ ವಿಚಾರ ತಿಳಿದು ಬಂದಿತ್ತು. ಸದ್ಯ ಆರೋಪಿ ಎನ್‌ಐಎ ವಶದಲ್ಲಿದ್ದಾನೆ.