ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ ಉಂಟಾಗಬಹುದಾದ 34 ಜಾಗಗಳನ್ನು ಗುರುತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ, ಪ್ರಾಕೃತಿಕ ವಿಕೋಪ ವಿಚಾರವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಸಾಧ್ಯತೆಯ 63 ಜಾಗಗಳು ಮತ್ತು ರಸ್ತೆಗಳು ಸೇರಿದಂತೆ ಭೂ ಕುಸಿತ ಸಾಧ್ಯತೆಯ 87 ಜಾಗಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಸದ್ಯ ನಾಲ್ಕು ದಾರಿಯಿದ್ದು, ಇದರಲ್ಲಿ ಎರಡು ದಾರಿ ಬಂದ್ ಆಗಿದೆ. ಹೀಗಾಗಿ ಆದಷ್ಟು ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ ಮುಂದೂಡಿ. ಹೊರಗಿನ ಪ್ರವಾಸಿಗರು ಅಪಾಯಕಾರಿ ಜಲಪಾತ, ನೀರಿಗೆ ಇಳಿಯುವಂತ್ತಿಲ್ಲ. ದೇವಸ್ಥಾನ ಭೇಟಿಗೆ ಬಂದವರು ದೇವರ ದರ್ಶನ ಅಷ್ಟೇ ಮಾಡಿ. ರೆಡ್ ಅಲರ್ಟ್ ಇರುವ ಈ ರಸ್ತೆಗಳಲ್ಲಿ ಪ್ರಯಾಣ ಸೂಕ್ತವಲ್ಲ. ಯಾವುದೇ ರಸ್ತೆ ಬಿರುಕು ಬಿಟ್ಟಲ್ಲಿ 112 ನಂಬರ್ಗೆ ಮಾಹಿತಿ ನೀಡಿ ಎಂದರು.
ಸಿಎಂ ಸಿದ್ಧರಾಮಯ್ಯ ಅವರು ಹಲವಾರು ನಿರ್ದೇಶನ ನೀಡಿದ್ದಾರೆ. ಸಾವು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಈ ಬಾರಿ ಪ್ರತೀ ಗ್ರಾಮ ಪಂಚಾಯತಿ ನಗರಸಭೆ, ಪಾಲಿಕೆ ಸೇರಿ 296 ಪ್ರಾಕೃತಿಕ ವಿಕೋಪ ನಿಯಂತ್ರಣ ತಂಡ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದ ಅನುದಾನ, ಅಧಿಕಾರ ಎಲ್ಲವನ್ನೂ ಅವರಿಗೆ ಕೊಡಲಾಗಿದೆ. ಎಲ್ಲವನ್ನೂ ಡಿಸಿ ಕಚೇರಿ ಮೂಲಕ ನಿಯಂತ್ರಣ ಮಾಡಲಾಗುತ್ತೆ.
ಸ್ಥಳೀಯ ಮಟ್ಟದಲ್ಲಿ ಮೊದಲ ರೆಸ್ಪಾನ್ಸ್ ಟೀಂ ಕೆಲಸ ಮಾಡಲಿದೆ. ಅಪಾಯಕಾರಿ ಜಾಗದಲ್ಲಿ ಇರುವವರನ್ನು ನೋಟಿಸ್ ಕೊಟ್ಟು ಸ್ಥಳಾಂತರ ಮಾಡುತ್ತೇವೆ. ಹೋಗಿಲ್ಲ ಅಂದರೆ ಪೊಲೀಸ್ ಬಲ ಪ್ರಯೋಗಿಸಿ ಸ್ಥಳಾಂತರ ಮಾಡುತ್ತೇವೆ. ಪ್ರಾಣ ಉಳಿಸಲು ಇಂಥ ಕ್ರಮಗಳ ಅಗತ್ಯ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.