ಸಮಗ್ರ ನ್ಯೂಸ್: ಪುತ್ತೂರಿನ ಪಾಂಗಳಾಯಿ ಕಾಲುವೆ ಬಳಿಯಲ್ಲಿ ಕೊಳೆತ ಶವವೊಂದು ಪತ್ತೆಯಾಗಿದ್ದು. ಸದ್ಯ ಕಾಲುವೆಯಿಂದ ಶವವನ್ನು ಮೇಲಕ್ಕೆತ್ತಿರುವ ಪುತ್ತೂರು ನಗರ ಪೊಲೀಸರು ಅದನ್ನು ಶವಗಾರಕ್ಕೆ ವರ್ಗಾಯಿಸಿದ್ದಾರೆ.
ಪುತ್ತೂರು ಪಾಂಗಳಾಯಿ ಪರಿಸರದಲ್ಲಿ ಬಿದಿರಿನ ಮೆಳೆಯಲ್ಲಿ ಈ ಮೃತ ದೇಹ ಸಿಲುಕಿ ಹಾಕಿಕೊಂಡಿತ್ತು. ಸ್ಥಳೀಯರು ಮೀನು ಹಿಡಿಯಲೆಂದು ತೋಡಿಗೆ ಹೋಗುವ ಸಂದರ್ಭದಲ್ಲಿ ದುರ್ನಾತ ಬಂದಿದ್ದು, ಹುಡುಕಾಟದ ವೇಳೆ ಯುವಕರಿಗೆ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಂತರ ಕೊಳೆತ ಅಪರಿಚಿತ ದೇಹ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬುತ್ತಿದ್ದಂತೆ ಕೆಲವರು ಪೊಲೀಸ್ ಠಾಣೆಗೆ ಸಂಪರ್ಕಿಸಿ ಮೃತ ದೇಹದ ಗುರುತು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ ಪುತ್ತೂರಿನ ಹೊರವಲಯದ ದೇವಪ್ಪ(60) ಎಂಬವರ ಮೃತದೇಹ ಎಂದು ತಿಳಿಸಿದ್ದಾರೆ. ದೇವಪ್ಪ ಅವರ ಕುಟುಂಬ ಸದಸ್ಯರು ಮೃತದೇಹದಲ್ಲಿನ ಬಟ್ಟೆಯ ಆಧಾರದಲ್ಲಿ ಅದನ್ನು ಖಚಿತ ಪಡಿಸಿದ್ದಾರೆ ಎನ್ನಲಾಗಿದೆ.
ಮೃತರು ಹೊಳೆ ಬದಿ ಏಡಿ, ಮೀನು ಹಿಡಿಯುವ ಜತೆಗೆ ಬಿದಿರಿನ ಮೆಳೆಯಿಂದ ಎಳೆ ಬಿದಿರು (ಕಣಿಲೆ) ತೆಗೆದು ಅಂಗಡಿಗಳಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ವ್ಯಾಪಾರದಲ್ಲೆ ತೊಡಗಿಕೊಂಡು ಮನೆಗೆ ಹೋಗುತ್ತಿರಲಿಲ್ಲ, ಕಳೆದ ಹತ್ತು ದಿನಗಳಿಂದ ಮನೆಗೆ ಆಗಮಿಸಿರಲಿಲ್ಲ ಎಂದು ಹೇಳಲಾಗಿದೆ .