ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ ಸೋಮನಕಾಡು ಕಣಿವೆ ಪ್ರಪಾತದ ಎಡಭಾಗದಲ್ಲಿ ಬಂಡೆಯ ಮೇಲಿಂದ ಸುರಿಯುವ ಮಳೆಯ ನೀರಿಗೆ ಮೈಯೊಡ್ಡಲು ಪ್ರವಾಸಿಗರು ಬಂಡೆಯ ಹತ್ತುವ ಸಾಹಸ ಮಾಡಿ ಹುಚ್ಚಾಟ ಮೆರೆಯುತ್ತಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ವಿಪರೀತ ಮಳೆಯಿದ್ದು ಅಸಂಖ್ಯ ಜಲಪಾತಗಳು ರಸ್ತೆಯಲ್ಲಿ ಕಣ್ಮನ ಸೆಳೆಯುತ್ತವೆ. ಆದರೆ ಕೆಲವು ವರ್ಷಗಳ ಹಿಂದೆ ಈ ಬಂಡೆ ಜಲಪಾತದಲ್ಲಿ ಯುವಕನೋರ್ವ ಬಂಡೆ ಹತ್ತಿ ಉರುಳಿ ಬಿದ್ದು ಜೀವಕ್ಕೆ ಅಪಾಯ ತಂದು ಕೊಂಡಿದ್ದ.ಕಳೆದ ಎರಡು ದಿನಗಳ ಹಿಂದೆ ಕೊಲ್ಲೂರಿನ ಅರಿಶಿನಗುಂಡಿ ಜಲಫಾತದಲ್ಲಿ ಭದ್ರಾವತಿಯ ಶರತ್ ಬಂಡೆ ಹತ್ತಿ ಕೊಚ್ಚಿ ಹೋದ ಘಟನೆ ಮಾಸುವ ಮುನ್ನವೇ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ಚಾರ್ಮಾಡಿ ಘಾಟ್ ನಲ್ಲಿ ಗಸ್ತು ತಿರುಗಿ ಪ್ರವಾಸಿಗರನ್ನು ಹೆದರಿಸಿ ಚದುರಿಸಿದರೂ ಪೊಲೀಸರು ವಾಪಾಸಾಗುತ್ತಿದ್ದಂತೆ ಮತ್ತೇ ಬೇರೆ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದು ರಾಷ್ಟೀಯ ಹೆದ್ದಾರಿ ಆದುದರಿಂದ ಸಾವಿರಾರು ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೂ ಪೊಲೀಸರ ಕಣ್ತಪ್ಪಿಸಿ ಅಪಾಯ ತಂದೊಡ್ಡುತ್ತಿರುವುದು ಕೂಡ ಪ್ರವಾಸಿಗರ ನಿರ್ಲಕ್ಷ್ಯ ಕೂಡ ಕಾರಣವಾಗಿದೆ. ಪ್ರವಾಸಿಗರಿಗೆ ಎಷ್ಟು ಎಚ್ಚರಿಕೆಯ ನಾಮಫಲಕ ಹಾಕಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.