ಸಮಗ್ರ ನ್ಯೂಸ್: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಸಂಸ್ಥೆಗಳ ಬಗ್ಗೆ ಮಾನಹಾನಿಕರ ವರದಿ ಪ್ರಸಾರ ಮಾಡುತ್ತಿರುವ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿಗಳು ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಕ್ಷನ್ಸ್ ಕೋರ್ಟ್ ನಲ್ಲಿ ಸುಳ್ಳು ವರದಿಗಳನ್ನು ಪ್ರಸಾರ ಮಾಡದಂತೆ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಇದೀಗ 7 ಮಂದಿ ಸೇರಿ 54 ಮಾಧ್ಯಮ ಸಂಸ್ಥೆಗಳಿಗೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಕ್ಷನ್ಸ್ ಕೋರ್ಟ್ ನಿಂದ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ. ಅದಲ್ಲದೆ ಈ ಹಿಂದೆ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಮಾನಹಾನಿಕರ ಸುಳ್ಳು ಸುದ್ದಿಗಳನ್ನು ಪ್ರಸಾರ(ಅಪ್ ಲೋಡ್) ಮಾಡಿದ್ದನ್ನು ತೆಗೆದುಹಾಕಲು (ಡಿಲಿಟ್ ) ಜುಲೈ 19 ರಂದು ಆದೇಶ ಹೊರಡಿಸಿದೆ.
ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಕ್ಷನ್ಸ್ ನ್ಯಾಯಾಲಯವು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ, ಜಗದೀಶ್, ಪ್ರಭಾ ಎನ್. ಬೆಳವಾನಗಳ, ಸೋಮನಾಥ್ ನಾಯಕ್, ಬಿ.ಎಮ್. ಭಟ್, ವಿಠಲ್ ಗೌಡ, ಒಡನಾಡಿ ಸಂಸ್ಥೆ ಸೇರಿ 7 ಜನರಿಗೆ ಹಾಗೂ ದೃಶ್ಯ ಮಾಧ್ಯಮ, ವೆಬ್ ಸೈಟ್, ಪತ್ರಿಕೆ, ಯೂಟ್ಯೂಬ್, ವಾಟ್ಸಪ್, ಫೇಸ್ ಬುಕ್, ಇನ್ಟ್ರಾಗ್ರಾಂ, ಗೂಗಲ್ ಸೇರಿದಂತೆ ಒಟ್ಟು 54 ಸಂಸ್ಥೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ, ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾಜ್ಞೆಯನ್ನು ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಈ ಆದೇಶದ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿಗಳ ಮತ್ತು ಅವರ ಕುಟುಂಬದ ಬಗ್ಗೆ ಈ ಮೊದಲು ಮಾನಹಾನಿಕರ ಸುಳ್ಳು ವರದಿಗಳನ್ನು ಪ್ರಸಾರ ಮಾಡಿ ಯೂಟ್ಯೂಬ್, ಗೂಗಲ್, ವೆಬ್ ಸೈಟ್ ಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದನ್ನು ತಕ್ಷಣ ತೆಗೆದುಹಾಕಲು (ಡಿಲಿಟ್) ಮಾಡಲು ಕೋರ್ಟ್ ಆದೇಶ ಮಾಡಿದೆ.
ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ರಾಜಶೇಖರ್.ಎಸ್ ರವರು ಅರ್ಜಿದಾರರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿಗಳಾದ ಶೀನಪ್ಪ, ಸುಕೇಶ್, ಪುರಂದರ, ಭೋಜ ಪರ ಬೆಂಗಳೂರು ಕೋರ್ಟ್‌ನಲ್ಲಿ ವಾದಿಸಿದರು.