ಸಮಗ್ರ ನ್ಯೂಸ್: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋ ದರ 100ರೂ ಗಡಿದಾಟಿದೆ. ಹೀಗಿರುವಾಗ, ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.3 ಹೆಚ್ಚಳ ಮಾಡಲಾಗಿದೆ.
ಈ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿದರು. ಈ ಸಭೆಯಲ್ಲಿ ಹಾಲು ಒಕ್ಕೂಟಗಳು ನೀಡಿರುವ ನಂದಿನಿ ದರ 5 ರೂ ಹೆಚ್ಚಳ ಪ್ರಸ್ತಾನೆಯ ಬಗ್ಗೆ ಮಹತ್ವದ ಚರ್ಚೆಯನ್ನು ನಡೆಸಿದರು. ಅಲ್ಲದೇ ನಂದಿನಿ ಹಾಲಿನ ಪುಡಿಯ ದರವನ್ನು ಹೆಚ್ಚಳದ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಅಂತಿಮವಾಗಿ ಸತತ 3 ಗಂಟೆಗಳಿಗೂ ಹೆಚ್ಚು ಕಾಲ ನಡೆದಂತ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ, ನಂದಿನಿ ಹಾಲಿನ ದರವನ್ನು 5ರೂ ಹೆಚ್ಚಳದ ಬದಲಾಗಿ ಪ್ರತಿ ಲೀಟರ್ ಗೆ 3 ರೂ ಹೆಚ್ಚಳ ಮಾಡುವಂತ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಪರಿಷ್ಕೃತ ಹೆಚ್ಚಳದ ದರವು ಆಗಸ್ಟ್ 1ರಿಂದಲೇ ಜಾರಿಗೆ ಬರಲಿದೆ.