ಸಮಗ್ರ ನ್ಯೂಸ್: ಇತ್ತೀಚೆಗಷ್ಟೇ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂತೋಷ್ ರಾವ್ನನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಆದರೆ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ಮುನ್ನವೇ ಸೌಜನ್ಯ ಹೆಸರಲ್ಲಿ ಜಿ.ಕೆ ವೆಂಚರ್ಸ್ ಹೆಸರಿನ ಸಂಸ್ಥೆಯೊಂದು ಸಿನಿಮಾ ಮಾಡಲು ಮುಂದಾಗಿದ್ದು ಚಲನಚಿತ್ರ ಮಂಡಳಿಯಲ್ಲಿ ಶೀರ್ಷಿಕೆಯನ್ನು ನೋಂದಣಿ ಕೂಡ ಮಾಡಲಾಗಿದೆ. ಈ ಸಿನಿಮಾದ ಹೆಸರನ್ನು ‘ಸ್ಟೋರಿ ಆಫ್ ಸೌಜನ್ಯ’ ಎಂದು ಇಡಲಾಗಿದೆ.
ಈ ಸಿನಿಮಾದ ನಿರ್ದೇಶನವನ್ನು ವಿ. ಲವ ಎನ್ನುವವವರು ಮಾಡಲಿದ್ದಾರೆ. ಇದೊಂದು ಸಾಮಾಜಿಕ ಚಿತ್ರವಾಗಿರಲಿದೆ ಎನ್ನಲಾಗುತ್ತಿದೆ. ಇನ್ನೂ ಬಗೆಹರಿಯದ ಪ್ರಕರಣದ ಆಧಾರದ ಮೇಲೆ ಸಿನಿಮಾ ನಿರ್ಮಾಣ ಮಾಡುವುದು ಎಷ್ಟು ಸರಿ ಎನ್ನುವುದು ಒಂದು ಪ್ರಶ್ನೆಯಾದರೆ, ಸಿನಿಮಾ ಕ್ಲೈಮ್ಯಾಕ್ಸ್ನಿಂದಾಗಿ ಮುಂದೆ ಯಾವ ವಿವಾದ ಭುಗಿಲೇಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
‘ಸ್ಟೋರಿ ಆಫ್ ಸೌಜನ್ಯ’ ಹೆಸರಿನಲ್ಲಿ ವಿದ್ಯಾರ್ಥಿನಿ ಸೌಜನ್ಯ ಹತ್ಯೆಯ ಕಥೆ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ 11 ವರ್ಷಗಳ ಕಾನೂನು ಹೋರಾಟದ ಸಂಪೂರ್ಣ ಕಥೆ ತೆರೆಗೆ ತರಲು ಉದ್ದೇಶಿಸಲಾಗಿದೆ. 17 ವರ್ಷದ ಸೌಜನ್ಯ ಗೌಡ ಅತ್ಯಾಚಾರದ ಪ್ರಕರಣ ಪ್ರೇಕ್ಷಕರ ಮುಂದೆ ತರಲು ಜಿ.ಕೆ. ವೆಂಚರ್ಸ್ ತಯಾರಾಗಿದೆ.
ಏನಿದು ಪ್ರಕರಣ?
ಸುಮಾರು 11 ವರ್ಷಗಳ ಹಿಂದೆ, ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿಯ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಪ್ರಕರಣದ ಹಿಂದೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಅವರ ಕುಟುಂಬಸ್ಥರ ಕೈವಾಡ ಇದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಪ್ರಕರಣ, ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿತ್ತು.