ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರು ನಂತರ ರಾಜ್ಯದ ಎರಡನೇ ಅತಿ ಪ್ರಮುಖ ನಗರ ಹುಬ್ಬಳ್ಳಿ-ಧಾರವಾಡ ಮಹಾನಗರ. ಇಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಈಗಾಗಲೆ ಬಿಆರ್‌ಟಿಎಸ್ ಬಸ್ಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಬಿಆರ್‌ಟಿಎಸ್ ಬಸ್ಗಳ ಜೊತೆಗೆ ಲಘು ರೈಲು ಸಾರಿಗೆಯನ್ನು ಪರಿಚಯಿಸಲು ಸರ್ಕಾರ ಮುಂದಾಗಿದೆ.
ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದು, ಲಘು ರೈಲು ಸಾರಿಗೆಯ ಆರಂಭಿಕ ಯೋಜನೆಗೆ ಕಾರ್ಯತಂತ್ರ ರೂಪಿಸಲಾಗಿದೆ. ಇನ್ನೂ ನಾಲ್ಕು ವಾರಗಳಲ್ಲಿ ಪ್ರಸ್ತಾವನೆ ಸಿದ್ದವಾಗಲಿದೆ. ಸಾರ್ವಜನಿಕ – ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೇ ಒಂದೂವರೆ ವರ್ಷದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದರು.
ಲಘು ರೈಲು ಸಾರಿಗೆ ಜಾರಿಯಾದಾಗ ಬಿಆರ್‌ಟಿಎಸ್ ಅನ್ನು ನಿಲ್ಲಿಸುವುದಿಲ್ಲ. ಮುಂದಿನ 10 ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ವೇಗವಾಗಿ ಬೆಳೆಯಲಿದೆ. ಬೆಂಗಳೂರು ನಂತರ ಜನರು ವಾಸ್ತವ್ಯಕ್ಕೆ ಮತ್ತು ಕೈಗಾರಿಕೆಗಳಿಗೆ ಈ ನಗರವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆದ್ದರಿಂದ ಮುಂದಿನ 10-20 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವಳಿ ನಗರಗಳನ್ನು ಅಭಿವೃದ್ಧಿಪಡಿಸಲು ಯೋಚಿಸಬೇಕು. ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಬೇಕು ಎಂಬ ವರದಿ ಸಹ ನೀಡಲಾಗಿದೆ ಎಂದು ತಿಳಿಸಿದರು.