”ಜನರು ಹೀಗೆ ವರ್ತಿಸಿದಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುವುದು” ಮಂಡ್ಯ: ಸತತ ಲಾಕ್‌ಡೌನ್‌ನಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಕಾರಣ ಜಿಲ್ಲೆಯನ್ನು ಇಂದಿನಿಂದ ಅನ್‌ಲಾಕ್ ಮಾಡಲಾಗಿದೆ. ಜನರು ಮುಂದಿನ ದಿನಗಳಲ್ಲಿ ಕೊರೊನಾ ಮಾರ್ಗ ಸೂಚಿಗಳನ್ನು ಅನುಸರಿಸದೇ ಇದ್ದರೆ ಮತ್ತೆ ಲಾಕ್‌ಡೌನ್ ಮಾಡುವುದುದಾಗಿ ಜಿಲ್ಲಾಧಿಕಾರಿ ಅಶ್ವಥಿ ಅವರು ಎಚ್ಚರಿಕೆ ನೀಡಿದ್ದಾರೆ.
ಇಂದು ಜಿಲ್ಲೆಯನ್ನು ಅನ್‌ಲಾಕ್ ಮಾಡಿರುವ ಕಾರಣ ಮಂಡ್ಯ ನಗರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಬಟ್ಟೆ, ಚಿನ್ನ, ಮೊಬೈಲ್ ಅಂಗಡಿಗಳು ಸೇರಿದಂತೆ ಇತರೆ ಕಡೆ ಜನಗುಂಳಿ ನಿರ್ಮಾಣವಾಗಿದೆ. ಜನರು ಕೊರೊನಾ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಕೊರೊನಾ ಇಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ.
ಜನರ ಈ ವರ್ತನೆಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅಶ್ವಥಿ ಅವರು, ಮತ್ತೆ ಲಾಕ್‌ಡೌನ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಮಂಡ್ಯದಲ್ಲಿ ಪಾಸಿಟಿವಿಟಿ ಕಡಿಮೆ ಆಗಿದೆ. ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿಯೇ ಇದೆ. ನಾನು ಎರಡು ಮೂರು ದಿನ ನೋಡುತ್ತೇನೆ. ಜನರು ಹೀಗೆ ವರ್ತಿಸಿದಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುವುದು ಎಂದು ಹೇಳಿದ್ದಾರೆ.