ಸಮಗ್ರ ನ್ಯೂಸ್: ಮಲೆನಾಡಿನ ಹಸಿರ ಸೆರಗಿನಲ್ಲಿ ಐತಿಹಾಸಿಕ ತಾಣವೊಂದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಅದರಲ್ಲೂ ಬಲ್ಲಾಳರಾಯನ ದುರ್ಗದ ರಾಣಿಝರಿ ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿದೆ.
ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಸಮೀಪದ ಬಲ್ಲಾಳರಾಯನ ದುರ್ಗ ತಪ್ಪಲಿನಲ್ಲಿ ಈ ರಾಣಿಝರಿ ಎಂಬ ಪ್ರಫಾತ ಪ್ರವಾಸಿಗರ, ಯುವಕ ಯುವತಿಯರ ಮನೆ ಮಾತಾಗಿದೆ.ರಾಣಿಝರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಜೂರು, ನೆರೆಯ ಗ್ರಾಮಗಳು ನಮಗೆ ಗೋಚರಿಸುತ್ತವೆ.ಹಸಿರ ಪ್ರಫಾತದ ಕಣಿವೆ ಎಂತವರ ಎದೆಯನ್ನೊಮ್ಮೆ ನಡುಗಿಸುವ ಪ್ರಫಾತ. ಸಾವಿರಾರು ಅಡಿಯ ಪ್ರಫಾತ ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಿದವರು ರಾಣಿಝರಿಯನ್ನು ಮರೆಯುವುದಿಲ್ಲ. ರಾಣಿ ಝರಿಗೂ ರಾಣಿ ಚೆನ್ನಮ್ಮಾಜಿಗೂ ಅವಿನಾಭಾವದ ಸಂಬಂಧವಿದೆ. ಬಲ್ಲಾಳರಾಯನ ದುರ್ಗದ ಕೋಟೆಗಳು ಅವನತಿಯ ಅಂಚಿನಲ್ಲಿದ್ದರೂ ಕೂಡ ಇಲ್ಲಿ ಹಸಿರ ಹೊದ್ದ ಭೂಸಿರಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕಣ್ಣಿನಂಚಿನುದ್ದಕ್ಕೂ ಹಸಿರಾದ ಪರ್ವತದ ಶ್ರೇಣಿಗಳ ನೋಟ ಅವರ್ಣನೀಯ.ಹಾಗೆಯೇ ಬಲ್ಲಾಳರಾಯನ ದುರ್ಗ ನೋಡಲು ಬಂದ ಪ್ರವಾಸಿಗರಿಗೆ ತಂಗಲು ಅನೇಕ ಹೋಂ ಸ್ಟೇಗಳು, ಕಾಫಿ ಕಾರ್ನರ್ ಗಳು ತಲೆ ಎತ್ತಿವೆ.ರಾಣಿ ಝರಿಯಿಂದ ಬಲ್ಲಾಳರಾಯನ ದುರ್ಗ ನಾಲ್ಕು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕು.
ಮೊದಲು ರಾಣಿ ಝರಿ ನೋಡಿ ಪ್ರವಾಸಿಗರು ಬಲ್ಲಾಳರಾಯನ ದುರ್ಗದ ಹಾದಿ ಹಿಡಿಯುತ್ತಾರೆ. ಒಂದನೇ ಬಲ್ಲಾಳನ ಕೋಟೆ ಈಗ ಅಳಿವಿನಂಚಿನಲ್ಲಿ ಅರಣ್ಯ ಸೊಬಗು ಮಾತ್ರ ಪ್ರವಾಸಿಗರ ಸ್ವರ್ಗವಾಗಿಯೇ ಉಳಿದಿದೆ. ಬಲ್ಲಾಳರಾಯನ ದುರ್ಗ ರಾಣಿ ಝರಿ ಸುತ್ತಮುತ್ತಲಿನ ಪರಿಸರ ಮೋಜು ಮಸ್ತಿ ಮಾಡುವವರನ್ನು ನಿಯಂತ್ರಿಸಿ ಪರಿಸರ ಆಸ್ವಾಧಕರಿಗೆ ಮುಕ್ತ ತಾಣವಾಗಲಿ ಎಂಬುದು ಪರಿಸರ ಪ್ರಿಯರ ಆಶಯವಾಗಿದೆ.
‘ಬಲ್ಲಾಳರಾಯನ ದುರ್ಗ ಹಾಗೂ ರಾಣಿ ಝರಿ ಹಸಿರ ಮಂಜಿನಲ್ಲಿ ಮಿಂದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ನಮ್ಮ ರಾಜ್ಯದಲ್ಲೇ ಇಂತಹ ಸ್ಥಳಗಳು ಇರುವಾಗ ನಾವು ಬೇರೆ ರಾಜ್ಯಗಳಿಗೆ ಹೋಗಿ ನೋಡುವ ಅವಶ್ಯಕತೆ ಇರುವುದಿಲ್ಲ. ಜನರಿಗೆ ಇಲ್ಲಿ ಮನಸಿಗೆ ಮುದ ನೀಡುವ ಸ್ಥಳವೆಂದರೆ ತಪ್ಪಾಗಲಾರದು’: ಶಶಾಂಕ್, ಪ್ರವಾಸಿ, ಮೈಸೂರು.
ವರದಿ: ಸಂತೋಷ್ ಅತ್ತಿಗೆರೆ