ಸಮಗ್ರ ನ್ಯೂಸ್: ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ ರೈಲ್ವೆ ಬುಕಿಂಗ್ ಸೆಂಟರ್ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಹಿತರಕ್ಷಣಾ ವೇದಿಕೆಯ ಸದಸ್ಯರುಗಳು ಜು.14ರಂದು ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಕೊಡಗು ಜಿಲ್ಲಾ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ ವೇದಿಕೆಯ ಅಧ್ಯಕ್ಷರಾದ ರವಿ ಗೌಡ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ನಗರಸಭಾ ಮಳಿಗೆಯೊಂದರಲ್ಲಿ ಹಲವು ವರ್ಷಗಳ ಹಿಂದೆ ರೈಲ್ವೆ ಬುಕಿಂಗ್ ಸೆಂಟರ್ ಅನ್ನು ತೆರೆಯಲಾಗಿತ್ತು, ಆದರೆ 2018ರ ಪ್ರಕೃತಿ ವಿಕೋಪ ಹಾಗೂ 2 ವರ್ಷಗಳ ಕಾಲದ ಕೋವಿಡ್ ದಿನದ ಸಂದರ್ಭ ಮುಚ್ಚಲ್ಪಟ್ಟ ನೈರುತ್ಯ ರೈಲ್ವೆ ಟಿಕೆಟ್ ಬುಕಿಂಗ್ ಸೆಂಟರ್ ಇದುವರೆಗೂ ತೆರೆಯದೆ ಇದ್ದು ಭಾರತೀಯ ಸೇನೆಯಲ್ಲಿ ಕೊಡಗಿನ ಸಾವಿರಾರು ಜನ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಜನ ತೋಟ ಕಾರ್ಮಿಕರು ವಿವಿಧ ರಾಜ್ಯಗಳ ಅಸಂಖ್ಯಾತ ಕಾರ್ಮಿಕರು ಜಿಲ್ಲೆಗೆ ಬರುತ್ತಾರೆ, ಮಡಿಕೇರಿಯಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಸೆಂಟರ್ ಇದ್ದಾಗ ಸೈನಿಕರು ಹಾಗೂ ಕಾರ್ಮಿಕರುಗಳು ತಾವುಗಳು ತೆರಳಬೇಕಾದ ಸ್ಥಳಗಳಿಗೆ ರೈಲ್ವೆ ಟಿಕೆಟ್ ಗಳನ್ನು ಮುಂಗಡವಾಗಿ ಬುಕ್ ಮಾಡಿ ಪ್ರಯಾಣ ಬೆಳೆಸುತ್ತಿದ್ದರು. ಈ ವ್ಯವಸ್ಥೆ ಹೆಚ್ಚು ಅನುಕೂಲಕರವಾಗುತ್ತಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಮಡಿಕೇರಿ ನಗರ ಹಾಗೂ ಗ್ರಾಮೀಣ ಪ್ರದೇಶದವರಿಗೆ ಟಿಕೆಟ್ ಬುಕಿಂಗ್ ಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷರಾದ ರವಿ ಗೌಡ . ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್. ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಪ್ರಸಾದ್. ಮಡಿಕೇರಿ ತಾಲೂಕು ಅಧ್ಯಕ್ಷ ನಾಗೇಶ್. ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ. ನಿರ್ದೇಶಕಿ ಲಿಲ್ಲಿಗೌಡ. ಹಾಗೂ ವೇದಿಕೆ ಸದಸ್ಯರುಗಳು ಹಾಜರಿದ್ದರು.