ಸಮಗ್ರ ನ್ಯೂಸ್: ‘ತಾಯಿಯ ಸಾವಿಗೆ ತಂಗಿ ಬರದೆ ಹೇಗೆ ಅಂತಿಮ ಸಂಸ್ಕಾರ ಮಾಡಲಿ’ ಎಂದು ಸಹೋದರ ತಂಗಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಸಾವಿನ ಸುದ್ದಿ ಪ್ರಚಾರ ಮಾಡಿದ ಅಪರೂಪದ ಘಟನೆ ಸಕಲೇಶಪುರ ತಾಲ್ಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ಹೊನ್ನಮ್ಮ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಇವರ ಪುತ್ರಿ ಹರಿಣಿ ಮಹಿಳಾ ಸಂಘಗಳಲ್ಲಿ ಸುಮಾರು ₹5 ಲಕ್ಷ ಸಾಲ ಮಾಡಿ, ಸಾಲ ಕಟ್ಟಲು ಆಕೆ ಊರು ಬಿಟ್ಟಿದ್ದಾರೆ ಎನ್ನಲಾಗಿದೆ.
ಪುತ್ರ ರವಿ ತಾಯಿಯ ಶವದ ಮುಂದೆ ಕುಳಿತು, ‘ಮನೆ ಬಿಟ್ಟು ಹೋಗಿರುವ ತಂಗಿ ನೀನು ಎಲ್ಲಿದ್ದೀಯ ಗೊತ್ತಿಲ್ಲ. ಅಮ್ಮ ಸಾವನ್ನಪ್ಪಿದ್ದಾರೆ. ಅವರ ಅಂತಿಮ ಸಂಸ್ಕಾರಕ್ಕಾದರೂ ಎಲ್ಲೇ ಇದ್ದರೂ ಬಾ’ ಎಂದು ಮೊಬೈಲ್ ಪೋನ್‌ನಲ್ಲಿ ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿದ್ದಾರೆ. ಸಹೋದರಿ ಹರಿಣಿ ವಿವಾಹವಾಗಿ ಗಂಡನನ್ನು ತೊರೆದು ತವರು ಮನೆಯಲ್ಲಿಯೇ ಇದ್ದಳು ಎನ್ನಲಾಗಿದೆ.
ಈ ವೀಡಿಯೋ ವೈರಲ್ ಆಗಿದೆ. ಸಂಜೆವರೆಗೆ ತಾಯಿಯ ಅಂತಿಮ ಸಂಸ್ಕಾರಕ್ಕೆ ಹರಿಣಿ ಬಂದಿಲ್ಲ ಎನ್ನಲಾಗಿದ್ದು, ಅಂತಿಮ ಸಂಸ್ಕಾರ ಸಂಜೆ ನಡೆದಿದೆ.