ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಹನುಮ ಜಯಂತಿ ವೇಳೆ ಕ್ಲುಲ್ಲಕ ವಿಷಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕೊನೆಗೆ ವೇಣುಗೋಪಾಲ್ ನಾಯಕ್ ಎಂಬ ಯುವಕನ ಕೊಲೆಗೆ ಕಾರಣವಾಗಿದೆ. ಪ್ರಮುಖ ಆರೋಪಿಗಳಾದ ಮಣಿಕಂಠ ಮತ್ತು ಸಂದೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಟಿ ನರಸೀಪುರದಲ್ಲಿ ಧರ್ಮ ಜಾಗೃತಿ ಬಳಗದ ವತಿಯಿಂದ ಶನಿವಾರ ಹನುಮ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಗುಂಜ ನರಸಿಂಹಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಸಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಣಿಕಂಠ ಮತ್ತು ಸಂದೇಶ್ ಎಂಬುವವರು ಬೈಕ್‌ನಲ್ಲಿ ಬಂದಿದ್ದಕ್ಕೆ ಆಯೋಜಕರು ಮತ್ತು ವೇಣುಗೋಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು. ಆನಂತರ ಮಣಿಕಂಠ ಮತ್ತು ಸಂದೇಶ್ ಪುನೀತ್ ರಾಜ್‌ಕುಮಾರ್ ಫೋಟೊ ಇರುವ ಬ್ಯಾನರ್ ಹಾಕಲು ಮುಂದಾದಾದ ಅದನ್ನು ವೇಣುಗೋಪಾಲ್ ತಡೆದಿದ್ದು ಜಗಳ ಉಲ್ಭಣವಾಗಲು ಕಾರಣವಾಗಿತ್ತು.
ಕುಪಿತಗೊಂಡು ವೇಣುಗೋಪಾಲ್ ಮೇಲೆ ಹಗೆ ಸಾಧಿಸಿದ ಮಣಿಕಂಠ ಮತ್ತು ಸಂದೇಶ್ ಭಾನುವಾರ ಮಧ್ಯಾಹ್ನ ಶಾಮಿಯಾನ ಅಂಗಡಿಯಲ್ಲಿ ವೇಣುಗೋಪಾಲ್ ಜೊತೆ ಗಲಾಟೆ ಆರಂಭಿಸಿದ್ದರು. ಪೊಲೀಸರು ಬಂದಿದ್ದಕ್ಕೆ ಸುಮ್ಮನಾದ ಅವರು ಸಂಜೆ ವೇಳೆ ರಾಜಿ ಪಂಚಾಯ್ತಿಗೆ ಎಂದು ಮಾರುತಿ ಸರ್ವೀಸ್ ಸ್ಟೇಷನ್ ಬಳಿ ಕರೆಸಿಕೊಂಡು ಮದ್ಯದ ಬಾಟಲಿಗಳಿಂದ ಹೊಡೆದು, ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವೇಣುಗೋಪಾಲ್ ನಾಯಕ್ ಸಹವರ್ತಿ ರಾಮಾನುಜಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಟಿ ನರಸೀಪುರ ಪೊಲೀಸರು ಮಣಿಕಂಠ ಮತ್ತು ಸಂದೇಶ್‌ರವರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ನಾಯಕ ಜನಾಂಗದ ಮಣಿಕಂಠ, ಅನಿಲ್, ಕುರುಬ ಜನಾಂಗದ ಶಂಕರ, ಒಕ್ಕಲಿಗ ಜನಾಂಗದ ಸಂದೇಶ್ ಸೇರಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೃತದೇಹದ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಸಮಾಜ ಕಲ್ಯಾಣ ಇಲಾಖೆಯಿಂದ 8.25 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು ಎನ್ನಲಾಗಿದೆ.