ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಗರದ ಹೊರವಲಯದಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದಿರುವ ಘಟನೆ ನಡೆದಿದೆ.
ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಗುಡ್ಡ ಭಾರೀ ಮಳೆಯಿಂದಾಗಿ ಕುಸಿದಿದ್ದು, ಮತ್ತಷ್ಟು ಕುಸಿಯುವ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ ಆತಂಕ ಶುರುವಾಗಿದೆ.
ಸದ್ಯ ಗುಡ್ಡ ಕುಸಿದ ಸ್ಥಳದಲ್ಲಿ ಜಿಲ್ಲಾಡಳಿತ ಟಾರ್ಪಲ್ ಹೊದಿಸಲಾಗಿದೆ. ಸದ್ಯ ಪಿವಿಎಸ್-ಕೆ.ಎಸ್. ರಾವ್ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
ಇನ್ನು ಮಂಗಳೂರು ನಗರದ ಹೊರವಲಯ ಮಂಜನಾಡಿ ಗ್ರಾಮದ ನಾಟೆಕಲ್ ಸಮೀಪದ ಜೊಹರಾ ಎಂಬವರ ಮನೆಗೆ ಸಮೀಪದ ಗುಡ್ಡದ ಮಣ್ಣು ಕುಸಿದು ಅಪಾರ ಹಾನಿಯಾಗಿದ್ದು ಇನ್ನಷ್ಟು ಮಣ್ಣು ಕುಸಿಯುವ ಅಪಾಯ ಎದುರಾಗಿದೆ. ಪಾವೂರು ಗ್ರಾಮದ ಪೋಡಾರ್ ಸೈಟ್ ಎಂಬಲ್ಲಿ ಭಾರೀ ಮಳೆಗೆ ಗುಡ್ಡದ ಮಣ್ಣು ಕುಸಿತಗೊಂಡಿದೆ. ಬೆಳ್ಮ ಗ್ರಾಮದ ದೇರಳಕಟ್ಟೆ ಬಳಿ ಇಸ್ಮಾಯಿಲ್ ಎಂಬವರ ಮನೆಗೆ ಗುಡ್ಡದ ಮಣ್ಣು ಕುಸಿದು ಹಾನಿಯಾಗಿದೆ. ಬೆಳ್ಮ ಗ್ರಾಮದ ಬರಿಕೆ ಎಂಬಲ್ಲಿ ದೈವಸ್ಥಾನಕ್ಕೆ ಮಣ್ಣು ಕುಸಿದು ಹಾನಿಯಾಗಿದೆ. ಅಂಬ್ಲಮೊಗರು ಗ್ರಾಮದ ಸಣ್ಣ ಮದಕ ಎಂಬಲ್ಲಿಯೂ ದರೆ ಕುಸಿದು ಮನೆಯ ತಡೆಗೋಡೆ ಕುಸಿದು ಬಿದ್ದಿದೆ.