ಸಮಗ್ರ ನ್ಯೂಸ್: ದೇವರ ದರ್ಶನಕ್ಕೆಂದು ಹೋಗಿ ಮರಳಿ ಊರಿಗೆ ಬರುವಾಗ ಸಿಮೆಂಟ್ ಟ್ಯಾಂಕರ್ ಹಾಗೂ ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಲಲಿತಾಬಾಯಿ ಮಹಾದೇವ ಬುಗ್ಗೆ (50), ರೋಹಿಣಿ ಗೋಪಾಲ ಪೂಜಾರಿ (40), ಸುಂದರಾಬಾಯಿ ಭರತಸಿಂಗ್ ರಜಪೂತ (55), ಸಾಹಿನಾಥ್ ಗೋವಿಂದ ಪೂಜಾರಿ (10) ಸಂಗೀತ ಮದನ್ ಗಾನೆ (35) ಛಾಯಾ ಹನುಮಾನ ನವರೆ (46) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ 10 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಆಳಂದ ತಾಲೂಕಿನ ಅಣ್ಣೂರ ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ.
ಗುರುವಾರ ಮಧ್ಯಾಹ್ನ ಅಣ್ಣೂರ ಗ್ರಾಮದಿಂದ ಅಫಜಲಪುರ ತಾಲೂಕಿನ ಘತ್ತರಗಿ ಭಾಗಮ್ಮ ದರ್ಶನಕ್ಕೆಂದು ಆಗಮಿಸಿ ಘತ್ತರಗಾದಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಬೆಳಗ್ಗೆ ಅಲ್ಲಿಂದ ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಮಂದಿರಕ್ಕೆ ಬಂದು ದರ್ಶನ ಪಡೆದು ಮರಳಿ ಊರಿಗೆ ಬರುವಾಗ ಈ ದುರ್ಘಟನೆ ನಡೆದಿದೆ.
ಘಟನೆ ಸ್ಥಳದಲ್ಲಿ ಇದ್ದ ಗ್ರಾಮಸ್ಥರು ಅಂಬುಲೆನ್ಸ್‌ಗೆ ಕರೆ ಮಾಡಿ ಸೊಲ್ಲಾಪುರ ಆಸ್ಪತ್ರೆಗೆ ಕಳುಹಿಸಿದ್ದಾರೆ. ವಿಷಯ ತಿಳಿಯುತ್ತಲೇ ಅಕ್ಕಲಕೋಟ ಪೊಲೀಸರು ಸೊಲ್ಲಾಪುರ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.