ಸಮಗ್ರ ನ್ಯೂಸ್: ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಸ್ವಾದಿಷ್ಟ ಆಹಾರ ನೀಡಬೇಕು ಎಂದು ಈ ಹಿಂದಿನ ಸಿದ್ದರಾಮಯ್ಯ ಸರಕಾರ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಅದರಂತೆ ಸುಳ್ಯದಲ್ಲಿಯೂ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಿತ್ತು.
ಸುಳ್ಯ ಮಿನಿವಿಧಾನ ಸೌಧದ ಬಳಿ ಇರುವ ಇಂದಿರಾ ಕ್ಯಾಂಟೀನ್ ಕಳೆದ ಹಲವು ವರ್ಷಗಳಿಂದ ಅನ್ನ ದಾಸೋಹ ಮಾಡುತ್ತಿದೆ. ಇದೀಗ ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬಂದಿರುವ ಹಿನ್ನಲೆಯಲ್ಲಿ ಈ ಕ್ಯಾಂಟಿನ್‌ಗಳಿಗೆ ಇನ್ನಷ್ಟು ಕಾಯಕಲ್ಪ ನೀಡಿ ಕೆಲವೊಂದು ಬದಲಾವಣೆ ತರುವ ಸಾಧ್ಯತೆ ಇದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಹೊಸ ಆಹಾರದ ಮೆನು ಬರುವ ಸಾಧ್ಯತೆಯೂ ಇದೆ ಎಂದು ನಿರೀಕ್ಷಿಸಲಾಗಿತ್ತಿದೆ. ಜುಲೈ ತಿಂಗಳಿನಿಂದ ಆಹಾರದ ಮೆನು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಅದೇಶ ಇನ್ನೂ ಹೊರ ಬಂದಿಲ್ಲ. ಈಗ ಬೆಳಿಗ್ಗೆ ಇಡ್ಲಿ ಸಾಂಬಾರ್, ಫುಲಾವು ನೀಡಲಾಗುತ್ತದೆ. ಮಧ್ಯಾಹ್ನ ಅನ್ನ, ಸಾಂಬಾರ್, ಪಲ್ಯ, ಉಪ್ಪಿನ ಕಾಯಿ ಇದ್ದರೆ ಸಂಜೆಯ ವೇಳೆಗೆ ರೈಸ್ ಬಾತ್, ಚಿತ್ರಾನ್ನ ಇರುತ್ತದೆ.
ಬೆಳಿಗ್ಗೆ ತಿಂಡಿಗೆ 5 ರೂ, ಮಧ್ಯಾಹ್ಮದ ಊಟಕ್ಕೆ 10 ರೂ ಹಾಗೂ ಸಂಜೆಯ ತಿಂಡಿಗೆ 10 ರೂ ದರ ಇರುತ್ತದೆ. ಆದಿತ್ಯವಾರ ಬೆಳಗ್ಗೆ ಸಿಹಿ ಕೇಸರಿಬಾತ್ ಸ್ಪೆಷಲ್ ಇರುತ್ತದೆ ಎಂದು ಸುಳ್ಯದ ಇಂದಿರಾ ಕ್ಯಾಂಟೀನ್‌ನ ಉಸ್ತುವಾರಿ ಪ್ರಶಾಂತ್ ಹೇಳುತ್ತಾರೆ. ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸೇರಿ ಪ್ರತಿದಿನ ಸುಮಾರು 200ಕ್ಕೂ ಹೆಚ್ಚು ಮಂದಿ ಸುಳ್ಯದ ಇಲ್ಲಿ ಊಟ, ತಿಂಡಿ ಸವಿಯುತ್ತಾರೆ.
ಸುಳ್ಯ ನಗರ ಪಂಚಾಯತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಜೂ.29ರಂದು ಸುಳ್ಯದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಮುಖಂಡರು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸವಿದು ಮರಳಿದರು.
ಅಭಿವೃದ್ಧಿ ಬೇಡಿಕೆ ಕುರಿತು ನ.ಪಂ.ಸಭೆಯಲ್ಲಿ ಪ್ರಸ್ತಾಪ:
ಇಂದಿರಾ ಕ್ಯಾಂಟೀನ್ ಕಟ್ಟಡದಲ್ಲಿ ನೀರು ಸೋರಿಕೆಯ ಸಮಸ್ಯೆ, ನೀರು ಹರಿದು ಹೋಗದ ಸಮಸ್ಯೆಗಳ ಬಗ್ಗೆ ಸಿಬ್ಬಂದಿಗಳು ನಗರ ಪಂಚಾಯತ್ ಸದಸ್ಯರ ಗಮನಕ್ಕೆ ತಂದರು. ಕಟ್ಟಡವನ್ನು ಚೆನ್ನಾಗಿ ನಿರ್ವಹಿಸುವ ಬಗ್ಗೆ, ಕಟ್ಟಡದ ಎದುರು ಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಸೀಟ್ ಅಳವಡಿಸಿ ಹೆಚ್ಚು ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವ ಬಗ್ಗೆ, ಎದುರಿನ ರಸ್ತೆ ಕಾಂಕ್ರೀಟೀಕರಣ ಮತ್ತಿತರ ಅಭಿವೃದ್ಧಿ ಮತ್ತು ನಿರ್ವಣೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ನಗರ ಪಂಚಾಯತ್ ಗಮನಕ್ಕೆ ತರುವುದಾಗಿ ನ.ಪಂ. ಸದಸ್ಯರಾದ ಎಂ.ವೆಂಕಪ್ಪ ಗೌಡ ಹಾಗೂ ಧೀರಾ ಕ್ರಾಸ್ತಾ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತಾ, ಕೆ.ಗೋಕುಲ್‌ದಾಸ್, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ.ಜೆ, ಚೇತನ್ ಕಜೆಗದ್ದೆ, ಶಹೀದ್ ಪಾರೆ, ರಾಜು ಪಂಡಿತ್, ನಂದರಾಜ ಸಂಕೇಶ್, ಹರಿಶ್ಚಂದ್ರ ಪಂಡಿತ್, ಭೋಜಪ್ಪ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.