ಸಮಗ್ರ ನ್ಯೂಸ್: ಅನ್ನ ಭಾಗ್ಯಕ್ಕಾಗಿ ಅಕ್ಕಿ ಸಿಗೋವರೆಗೂ ಪಡಿತರ ಚೀಟಿ ಹೊಂದಿದ ಮನೆಯೊಡಯನ ಖಾತೆಗೆ ಹತ್ತು ಕೆ.ಜಿ ಅಕ್ಕಿಯ ಹಣ ಹಾಕುವ ಚಿಂತನೆ ಇದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಅಕ್ಕಿ ಪೂರೈಕೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಸದಾ ಸಿದ್ದವಾಗಿದ್ದು ಈವಾಗ ಅಕ್ಕಿ ಬದಲು ಅಕ್ಕಿಯ ಹಣವನ್ನು ವಿತರಿಸಲು ಯೋಜಿಸಲಾಗಿದೆ ಎಂದರು.
ಪ್ರತೀ ಕೆ.ಜಿ ಅಕ್ಕಿಯ ಬೆಲೆ ₹. 34ರಂತೆ ಐದು ಕೆ.ಜಿಗೆ ₹. 170 ರೂಗಳನ್ನು ಮನೆ ಯಜಮಾನನ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಕುರಿತು ಶೀಘ್ರ ಕ್ರಮ ವಹಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
15 ಲಕ್ಷ ಟನ್‌ನಷ್ಟು ಅಕ್ಕಿಯನ್ನು ಮುಕ್ತ ಟೆಂಡರ್ ಮೂಲಕ ಕೆಜಿಗೆ 31 ರೂಪಾಯಿಯಂತೆ ಕೊಟ್ಟಿದ್ದಾರೆ. ನಾವು 34 ರೂಪಾಯಿ ಕೊಡುತ್ತೇವೆ ಎಂದರೂ ಸ್ಪಂದಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಬದಲಿ ಯೋಚನೆ ಮಾಡಬೇಕಾಯಿತು. ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳು ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ಕೇಂದ್ರ ಗೋದಾಮು ನಿಗಮವು ಒಂದು ಕೆಜಿ ಅಕ್ಕಿಗೆ ನಿಗದಿಪಡಿಸಿರುವ 34 ರೂಪಾಯಿ ಮೊತ್ತವನ್ನು ಜನರಿಗೇ ನೇರವಾಗಿ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮುನಿಯಪ್ಪ ತಿಳಿಸಿದರು.