ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಂದೆಂದೂ ಕಾಣದಂತೆ ಮಾಂಸದ ಬೆಲೆ ಏರಿಕೆಯಾಗುತ್ತಲೇ ಇದ್ದು, ಬಾಡೂಟ ಪ್ರಿಯರಿಗೆ ಕೋಳಿ ಮಾಂಸ ಈಗ ಬಲು ದುಬಾರಿಯಾಗಿದೆ. ಬೇಸಿಗೆಯಲ್ಲಿ ಉತ್ಪಾದನೆ ಕಡಿಮೆ ಹಾಗೂ ಬೇಡಿಕೆ ಹೆಚ್ಚು ಜೊತೆಗೆ ಕೋಳಿ ಆಹಾರದ ಬೆಲೆ ಹೆಚ್ಚಳದ ಪರಿಣಾಮ ಚಿಕನ್ ಬೆಲೆ ಗಗನಕ್ಕೇರಿದ್ದು, ಮಾಂಸ ಪ್ರಿಯರಿಗೆ ಬಾರಿ ಹೊರೆಯಾಗಿ ಪರಿಣಮಿಸಿದೆ.
ಕೋಳಿ ಮಾಂಸ ಹಾಗೂ ಮೊಟ್ಟೆ ತಿನ್ನುವವರು ಈಗ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಚಿಕನ್ ದರವು ಈಗ ಪ್ರತಿ ಕೆಜಿಗೆ 280-300 ತನಕ ಏರಿಕೆಯಾಗಿದೆ. ಪ್ರತಿ ಮೊಟ್ಟೆಗೆ 7 ರೂಪಾಯಿಗೂ ಅಧಿಕವಾಗಿದೆ. ಇದಕ್ಕೆಲ್ಲ ಕಾರಣ ಕೋಳಿ ಸಾಕಾಣಿಕೆಗೆ ಆಗುವ ಖರ್ಚು ಹಾಗೂ ಬೇಡಿಕೆ ಅಧಿಕವಾಗಿರುವುದು ಎನ್ನಲಾಗಿದೆ. ಸಾಮಾನ್ಯವಾಗಿ ಮಾಂಸ ಪ್ರಿಯರು ವಾರಕ್ಕೆ 2-3 ಬಾರಿ ಮಟನ್ ಅಥವಾ ಚಿಕನ್ ಸವಿಯಲು ಇಷ್ಟ ಪಡುತ್ತಾರೆ.
ಕೋಳಿ ಸಾಕಾಣಿಕೆ ಪ್ರಮಾಣ ಕಡಿಮೆ ಇದ್ದು, ಬೇಡಿಕೆ ದಿಢೀರ್ ಎಂದು ಹೆಚ್ಚಾದ ಕಾರಣ ಮಾಂಸದ ದರ ಭಾರೀ ಹೆಚ್ಚಳವಾಗಿದೆ. ಬೇಸಿಗೆ ಕಾಲದಲ್ಲಿ ಚಿಕನ್‌ಗೆ ಬೇಡಿಕೆ ಕಡಿಮೆಯಾದ ಕಾರಣ ಬೆಲೆ ಕೂಡ ಕಡಿಮೆಯಾಗಿತ್ತು. ಇದರಿಂದಾಗಿ ಕೋಳಿ ಸಾಕಾಣಿಕೆದಾರರು, ಉದ್ಯಮಿಗಳು ಸಾಕಾಣಿಕೆಯನ್ನು ಕಡಿಮೆ ಮಾಡಿದ್ದರು. ಮೇವಿನ ಕೊರತೆಯಿಂದಾಗಿ ಕುರಿ, ಮೇಕೆ ಸಾಕಾಣಿಕೆ ಪ್ರಮಾಣ ಕೂಡ ಕಡಿಮೆಯಾಗಿತ್ತು. ಆದರೆ, ಈಗ ಮಳೆಗಾಲ ಶುರುವಾಗಿದ್ದು ಚಿಕನ್, ಮಟನ್‌ಗೆ ಭಾರೀ ಬೇಡಿಕೆ ಉಂಟಾಗಿದೆ.
ಎರಡು ವಾರಗಳ ಹಿಂದೆ ಪ್ರತಿ ಕೆಜಿಗೆ 150 ರೂನಿಂದ 180ರೂ ವರೆಗೆ ಇದ್ದಿದ್ದು, ಇದೀಗ 250 ರಿಂದ 280 ರೂಗೆ ಏರಿಕೆಯಾಗಿದೆ. 500 ರೂ. ಗಳಿಂದ 600 ರೂ ಇದ್ದ ಮಟನ್ ಬೆಲೆ ಈಗ 700 ರೂನಿಂದ 800 ರೂಗೆ ಏರಿಕೆಯಾಗಿದೆ. ಇನ್ನು 15 ದಿನಗಳ ಹಿಂದೆ ಅಂಗಡಿಗಳಲ್ಲಿ ಒಂದು ಮೊಟ್ಟೆಗೆ 5.5 ರಿಂದ 6 ರೂ. ಇತ್ತು. ಸದ್ಯ 7 ರೂ.ನಿಂದ 8 ರೂಪಾಯಿಗೆ ಏರಿಕೆಯಾಗಿದೆ.
ಮಳೆಗಾಲದಲ್ಲಿ ಬಹುತೇಕರು ಶ್ರಾವಣದವರೆಗೆ ಮಾಂಸಾಹಾರ ಹೆಚ್ಚು ತಿನ್ನುತ್ತಾರೆ. ಇನ್ನು ಬೇಸಿಗೆಯಲ್ಲಿ ಚಿಕನ್ ದರ ನೆಲ ಕಚ್ಚಿತ್ತು. ಇದರಿಂದ ಪೌಲ್ಟ್ರಿ ಉದ್ಯಮಿಗಳು ಹೆಚ್ಚು ಉತ್ಪಾದನೆ ಮಾಡಲಿಲ್ಲ. ಇನ್ನು ಕುರಿ ಸಾಕಾಣಿಕೆ ಕೂಡ ಹೇಳಿಕೊಳ್ಳುವಷ್ಟು ಇಲ್ಲ. ಸದ್ಯ ಮದುವೆ ಸೇರಿ ಹಲವು ಸೀಜನ್‌ಗಳು ಬಂದಿದ್ದರಿಂದ ದಿಢೀರ್ ಬೇಡಿಕೆ ಹೆಚ್ಚಾಗಿ ಬೆಲೆ ಏರಲು ಕಾರಣವಾಗಿದೆ.