ಸಮಗ್ರ ನ್ಯೂಸ್: ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆಯಿಂದ ಜನಸಾಮಾನ್ಯನ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಿಂದ ಕೊಂಚ ನಿಟ್ಟುಸಿರು ಬಿಡುತ್ತಿದ್ದ ಜನರನ್ನು ಈಗ ಅಕ್ಕಿ, ಬೇಳೆಕಾಳುಗಳ ಬೆಲೆ ಏರಿಕೆ ಕಂಗಾಲಾಗುವಂತೆ ಮಾಡಿದೆ.
ಬೇಳೆಕಾಳುಗಳ ಬೆಲೆ ಹದಿನೈದು ದಿನಗಳಿಂದ ದಿಢೀರ್ ಏರಿದ್ದರೆ, ಅಕ್ಕಿ 2 ರೂ.ನಿಂದ ಆರಂಭವಾಗಿ ಈಗ ಸುಮಾರು 10-12 ರು.ವರೆಗೆ ಹೆಚ್ಚಳವಾಗಿದೆ. ಒಂದು ತಿಂಗಳ ಅಂತರದಲ್ಲೇ ಬೇಳೆಕಾಳುಗಳ ಬೆಲೆ 20-.30 ರವರೆಗೂ ಏರಿಕೆಯಾಗಿದೆ.
ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಮುಂದಿನ ನಾಲ್ಕು ತಿಂಗಳವರೆಗೂ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ರಾಜ್ಯಕ್ಕೆ ಅಕ್ಕಿ ಪೂರೈಸುವ ಪಂಜಾಬ್, ತೆಲಂಗಾಣ, ಆಂಧ್ರಪ್ರದೇಶಗಳು ಸದ್ಯಕ್ಕೆ ನೀಡಲು ಹಿಂದೇಟು ಹಾಕುತ್ತಿವೆ ಎಂದು ಯಶವಂತಪುರ ಎಪಿಎಂಸಿ ವರ್ತಕರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಅಕ್ಕಿ ಅಭಾವ ಇದೆ ಎಂದು ತಿಳಿದಾಕ್ಷಣ ಅವು ಅಕ್ಕಿ ಪೂರೈಕೆ ಮಾಡಲು ಹಿಂದೇಟು ಹಾಕುತ್ತಿವೆ. ಆಂಧ್ರದಲ್ಲಿಯೂ ಅಕ್ಕಿ ಕೊರತೆ ಇದೆ. ಆದರೆ ಅಲ್ಲಿ ನಮಗಿಂತ ಒಂದು ತಿಂಗಳು ಮೊದಲು ಮೊದಲ ಬೆಳೆ ಬರುತ್ತದೆ. ರಾಜ್ಯದಲ್ಲಿ ನವೆಂಬರ್‌ನಲ್ಲಿ ಮೊದಲ ಬೆಳೆ ನಿರೀಕ್ಷಿಸಬಹುದು. ಅಲ್ಲಿವೆರೆಗೆ ದರ ಏರಿಕೆ ಹೆಚ್ಚಾಗಬಹುದು ಎಂದು ವರ್ತಕರು ಹೇಳುತ್ತಾರೆ.