ಬೆಂಗಳೂರು: ‘ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ ಮನೆಗೆ ಬಂದು ಒಂದೂವರೆ ವರ್ಷವಾಗಿತ್ತು. ಅವರು ಹೊರಗಡೆ ಕರೆದೊಯ್ದು, ಇಷ್ಟವಾದ ತಿನಿಸು ಹಾಗೂ ವಸ್ತುಗಳನ್ನು ಕೊಡಿಸುತ್ತಿದ್ದರು. ಕೋವಿಡ್ ಕಾಯಿಲೆಯು ಅಪ್ಪನನ್ನು ನಮ್ಮಿಂದ ದೂರ ಮಾಡಿತು. ಈಗ ಹೊರಗಡೆ ಕರೆದೊಯ್ಯುವವರು ಯಾರು?’
ಇದು ಎಂಟೂವರೆ ವರ್ಷದ ಬಾಲಕಿಯ ಪ್ರಶ್ನೆ. ಮೂರನೇ ತರಗತಿ ಓದುತ್ತಿರುವ ಪೂರ್ವಿಕಾ ಕಳೆದ ಏಪ್ರಿಲ್‌ನಲ್ಲಿ ತಂದೆಯನ್ನು ಕಳೆದುಕೊಂಡಿದ್ದಾಳೆ. ಅವಳ ತಾಯಿ ಶುಶ್ರೂಷಕಿಯಾಗಿದ್ದು, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾದ ಹಲವಾರು ಕೊರೊನಾ ಸೋಂಕಿತರ ಆರೈಕೆ ಮಾಡಿದ್ದ ಅವರಿಗೆ, ಈ ಕಾಯಿಲೆಯಿಂದ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಾಯಿ ಕೆಲಸಕ್ಕೆ ತೆರಳಿದಾಗ ಮನೆಯಲ್ಲಿ ಏಕಾಂಗಿಯಾಗುವ ಬಾಲಕಿಗೆ ಅಪ್ಪನ ಅಗಲುವಿಕೆ ಕಾಡಲಾರಂಭಿಸಿದೆ.
‘ಮಗಳು ಚಿಕ್ಕವಳಾದ್ದರಿಂದ ಬಹಿರಂಗವಾಗಿ ದುಃಖವನ್ನು ತೋರ್ಪಡಿಸುತ್ತಿಲ್ಲ. ಆದರೆ, ಈಗ ಮನೆಯಲ್ಲಿ ಒಬ್ಬಂಟಿಯಾಗಿದ್ದಾಳೆ. ಅವಳು ಭಾವನೆಯನ್ನು ವ್ಯಕ್ತಪಡಿಸುತ್ತಿಲ್ಲ. ಮಗಳಿಗೆ 5 ವರ್ಷವಾದಾಗ ಪತಿ ಪ್ರಕಾಶ್ ಅವರು ಸೌದಿ ಅರೇಬಿಯಾಕ್ಕೆ ಉದ್ಯೋಗ ನಿಮಿತ್ತ ತೆರಳಿದ್ದರು. ಅಲ್ಲಿ ಎರಡು ವರ್ಷ ಕೆಲಸ ಮಾಡಿ, ಮರಳಿದ್ದರು. ಈ ಮಧ್ಯೆ ಒಂದು ವರ್ಷ ಮಗಳನ್ನು ಅಜ್ಜಿ ಮನೆಯಲ್ಲಿ ಬಿಟ್ಟಿದ್ದೆ. ಒಂದೂವರೆ ವರ್ಷದಿಂದ ಅಪ್ಪನ ಜತೆಗೆ ಸಂತೋಷದಿಂದ ಮಗಳು ಸಮಯ ಕಳೆದಿದ್ದಳು’ ಎಂದು ತಾಯಿ ಪ್ರಿಯಾಂಕಾ ಜೆ.ಆರ್ ತಿಳಿಸಿದರು.
‘ನನಗೆ, ಪತಿಗೆ, ಮಗಳಿಗೆ ಮತ್ತು ತಾಯಿಗೆ ಕಳೆದ ಏಪ್ರಿಲ್‌ನಲ್ಲಿ ಕೊರೊನಾ ಸೋಂಕು ತಗುಲಿತು. ನಮಗೆ ರೋಗ ಲಕ್ಷಣಗಳು ಗೋಚರಿಸಲಿಲ್ಲ. ಆದರೆ, ಪತಿ ಗಂಭೀರವಾಗಿ ಅಸ್ವಸ್ಥರಾಗಿ, ಚಿಕಿತ್ಸೆಗೆ ಸ್ಪಂದಿಸದೆಯೇ ಮೃತಪಟ್ಟರು. ಕೊನೆಯ ಬಾರಿ ತಂದೆಯ ಮುಖ ನೋಡಿದಾಗ ಮಗಳು ಭಾವುಕಳಾಗಿದ್ದಳು. ಮಗಳು ಉತ್ತಮ ನೃತ್ಯಗಾರ್ತಿ ಅಥವಾ ಕ್ರೀಡಾಪಟು ಆಗಬೇಕು ಎಂಬ ಆಸೆ ನನ್ನ ಪತಿಯದು’ ಎಂದರು.