ಸಮಗ್ರ ನ್ಯೂಸ್: ರಾಜ್ಯದ ಬೆಂಗಳೂರು, ಮಂಡ್ಯ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಕೋಲಾರ ಸೇರಿದಂತೆ ವಿವಿಧೆಡೆ ಮಂಗಳವಾರ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಬೀರುವಳ್ಳಿಯ ರೈತ ಮಂಜುನಾಥ್ ಮೃತಪಟ್ಟಿದ್ದು, ಮತ್ತೊಬ್ಬ ರೈತ ರಾಜು ಗಾಯಗೊಂಡಿದ್ದಾರೆ.
ದಾವಣಗೆರೆ, ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ವಿವಿಧೆಡೆ ಮಂಗಳವಾರ ಉತ್ತಮ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನದ ಬಳಿಕ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸೇರಿದಂತೆ ಕೆಲವೆಡೆ ಸಂಜೆ ಉತ್ತಮ ಮಳೆಯಾಗಿದೆ. ನಾಯಕನಹಟ್ಟಿಯಲ್ಲಿ 1 ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಮಳೆ ವಿಳಂಬದಿಂದಾಗಿ ಬಿತ್ತನೆ ಕಾರ್ಯ ತಡವಾಗಿತ್ತು. ಅಡಿಕೆ ಸಸಿಗಳು ಒಣಗುವ ಭೀತಿ ಎದುರಾಗಿತ್ತು. ಮಂಗಳವಾರದಿಂದ ಮಳೆ ಸುರಿಯುತ್ತಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಹಾಸನ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಜಿಲ್ಲಾ ಕೇಂದ್ರದ ರಾಜಕಾಲುವೆಯಲ್ಲಿ ನೀರು ಉಕ್ಕಿ ಹರಿದಿದ್ದು, ಬಿಎಸ್‌ಎನ್‌ಎಲ್ ಪಕ್ಕದ ರಸ್ತೆಯಲ್ಲಿ ವಾಹನಗಳು ಜಲಾವೃತಗೊಂಡಿದ್ದವು. ಕುವೆಂಪು ನಗರದ ಹಲವು ಮನೆಗಳಿಗೆ ಒಳಚರಂಡಿ ನೀರು ನುಗ್ಗಿತ್ತು.
ಶಿವಮೊಗ್ಗದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದ್ದು, ದಿಢೀರ್ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಲ್ಲದೆ ಬಿಸಿಲ ಧಗೆಯಿಂದ ತತ್ತರಿಸಿದ ಜನತೆಗೆ ಮಳೆ ತಂಪೆರೆದಿದೆ.
ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ರಸ್ತೆಗಳೆಲ್ಲವೂ ಜಲಾವೃತಗೊಂಡಿದ್ದವು. ಕೆಲವೆಡೆ ಮಳೆ ನೀರಿಗೆ ಬೈಕ್‌ಗಳು ಕೊಚ್ಚಿ ಹೋದರೆ, ಕಾರುಗಳು ಮುಳುಗಡೆ ಆಗಿದ್ದವು. ಕಣ್ಣೇದರೇ ಬೈಕ್‌ಗಳು ಮುಳುಗಿ ಹೋಗುತ್ತಿದ್ದರೆ ಸವಾರರು ಕಂಗಾಲಾಗಿದ್ದರು.