ಸಮಗ್ರ ನ್ಯೂಸ್: ಬರೋಬ್ಬರಿ ₹ 8.49 ಕೋಟಿ ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಮಹಿಳೆ ಹಾಗೂ ಆಕೆಯ ಗಂಡ ಪಂಜಾಬ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಆರೋಪಿಗಳು ಪೊಲೀಸ್ ಬಲೆಗೆ ಬಿದ್ದ ಸಂಗತಿ ರೋಚಕವಾಗಿದೆ.
ಡಾಕು ಹಸೀನಾ ಅಲಿಯಾಸ್ ಮಂದೀಪ್ ಕೌರ್ ಎನ್ನುವ ಮಹಿಳೆ ತನ್ನ ಗಂಡ ಹಾಗೂ ಇತರ 10 ಸಹಚರರೊಡನೆ ಜೂನ್ 10 ರಂದು ಲೂಧಿಯಾನದ ಭದ್ರತಾ ಏಜನ್ಸಿಯೊಂದರ ಕಚೇರಿಯಿಂದ ₹ 8.49 ಕೋಟಿ ನಗದನ್ನು ದೋಚಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಲೂಧಿಯಾನ ಪೊಲೀಸರು ಆರೋಪಿಗಳ ಹಿಡಿಯಲು ತಯಾರಾಗಿದ್ದರು. ಡಾಕು ಹಸೀನಾ ಹಾಗೂ ಆಕೆಯ ಗಂಡ ಜಸ್ವಿಂಧರ್ ಸಿಂಗ್ ಉತ್ತರಾಖಂಡದಲ್ಲಿ ದೇವಸ್ಥಾನಗಳಿಗೆ ಅಲೆದಾಡುತ್ತಾ ಪೊಲೀಸರ ಕಣ್ಣು ತಪ್ಪಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಇವರಿಗೆ ಬಲೆ ಬೀಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಉತ್ತರಾಖಂಡದ ಚಮೋಲಿಯ ಹೇಮಕುಂಡ ಸಾಹೀಬ್ ಗುರುದ್ವಾರಕ್ಕೆ ತೆರಳಿದ್ದರು. ಈ ವೇಳೆ ಜನಸಂದಣಿ ಹೆಚ್ಚಿತ್ತು. ಆಗ ಪೊಲೀಸರು ಫ್ರೂಟಿ ಜೂಸ್ ಪೊಟ್ಟಣಗಳನ್ನು (ತಲಾ ₹10 ಮೌಲ್ಯದ) ಯಾತ್ರಾರ್ಥಿಗಳಿಗೆ ಉಚಿತವಾಗಿ ವಿತರಿಸುವ ತಂತ್ರ ಹೆಣೆದಿದ್ದರು.
ಈ ವೇಳೆ ಅಲ್ಲಿಗೆ ಬಂದ ಡಾಕು ಹಸೀನಾ ಹಾಗೂ ಆಕೆಯ ಗಂಡ ಜಸ್ವಿಂಧರ್ ಸಿಂಗ್ ಫ್ರೂಟಿ ಪೊಟ್ಟಣಗಳನ್ನು ತೆಗೆದುಕೊಳ್ಳುತ್ತಾ ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದರು. ಅದಾಗ್ಯೂ ಕೂಡ ಅವರನ್ನು ಅಲ್ಲಿಂದ ತೆರಳಲು ಬಿಟ್ಟ ಪೊಲೀಸರು ಅವರನ್ನು ಹಿಂಬಾಲಿಸಿ ಬಲೆಗೆ ಕೆಡವಿದ್ದಾರೆ.
ಈ ಮಾಹಿತಿಯನ್ನು ಲೂಧಿಯಾನ ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಡಾಕು ಹಸೀನಾ ಹಾಗೂ ಆಕೆಯ ಗಂಡನನನ್ನು ಬಂಧಿಸಿದ್ದು, ಉಳಿದವರ ಪತ್ತೆಗಾಗಿ ಕ್ರಮ ವಹಿಸಲಾಗಿದೆ. ಇಬ್ಬರಿಂದ ₹21 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಈ ಆರೋಪಿ ದಂಪತಿಗಳು ದಿಢೀರ್ ಶ್ರೀಮಂತರಾಗಬೇಕು ಎಂದು ಹಣ ದೋಚಿದ್ದರು. ಬಳಿಕ ನೇಪಾಳದಲ್ಲಿ ನೆಲೆ ನಿಲ್ಲಬೇಕು ಎಂದು ಯೋಜಿಸಿದ್ದರು, ಅದಕ್ಕೂ ಮೊದಲು ಉತ್ತರಾಖಂಡದಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಮಾಡಬೇಕು ಎಂದುಕೊಂಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ವಿಶೇಷವೆಂದರೆ ಪೊಲೀಸರು ಈ ಕಾರ್ಯಾಚರಣೆಗೆ ‘let’s catch the queen bee’ ಎಂದು ಹೆಸರಿಟ್ಟಿದ್ದರು.