ಸಮಗ್ರ ನ್ಯೂಸ್: ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯದ ಪರಿಣಾಮ ರಾಜ್ಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಲಗ್ಗೆ ಇಡುತ್ತಿದ್ದಾರೆ.ವಾರಂತ್ಯದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳ ಕ್ಷೇತ್ರಕ್ಕೆ ಸಾವಿರಾರು ಮಹಿಳೆಯರು ಆಗಮಿಸಿದ್ದರು. ಅಲ್ಲಿಂದ ಅವರೆಲ್ಲಾ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಲು ಮುಂದಾಗಿದ್ದರಿಂದ ಸಾರಿಗೆ ಇಲಾಖೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ.
ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಭಾಗ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಕುಟುಂಬ ಸಮೇತ ಹಾಗೂ ಸ್ನೇಹಿತರ ಬಳಗ ಕಟ್ಟಿಕೊಂಡು ಸಾಗರೋಪಾದಿಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಇದರಿಂದ ಧರ್ಮಸ್ಥಳ ಹಾಗೂ ಕುಕ್ಕೆ ಕ್ಷೇತ್ರಗಳು ಸೇರಿ ಇಲ್ಲಿಗೆ ಬರುವ ಸಾರಿಗೆ ಬಸ್‌ಗಳೂ ತುಂಬಿ ತುಳುಕುತ್ತಿವೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಾಗರೋಪಾದಿಯಲ್ಲಿ ಮಹಿಳಾ ಭಕ್ತರು ಹರಿದು ಬಂದಿದ್ದಾರೆ. ಉಚಿತ ಪ್ರಯಾಣ ಘೋಷಣೆಯ ಬಳಿಕದ ಮೊದಲ ವೀಕೆಂಡ್‌ನಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರದ್ದೇ ಪೂರ್ತಿ ರಶ್ ಕಾಣಬರುತ್ತಿದೆ. ಧರ್ಮಸ್ಥಳ ಮಹಿಳೆಯರು, ಯುವತಿಯರಿಂದಲೇ ತುಂಬಿಹೋಗಿದ್ದು, ಹೆಚ್ಚಿನವರು ಉತ್ತರ ಕರ್ನಾಟಕ ಭಾಗದಿಂದಲೇ ಬಂದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಧಾರ್ಮಿಕ ಕ್ಷೇತ್ರ ಸಿಗಂದೂರಿಗೆ ಹೊಗುವವರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಈ ಕಡೆ ತೆರಳುವ ಬಸ್ಸುಗಳು ತುಂಬಿದ್ದು, ಸಿಗಂದೂರಿಗೆ ಹೆಚ್ಚುವರಿ ಬಸ್ ಬಿಡುಗಡೆ ಮಾಡಲು ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ ಮೆಜೆಸ್ಟಿಕ್‌ನಿಂದ ಸಿಗಂದೂರಿಗೆ ಪ್ರತ್ಯೇಕ ಬಸ್ ಬಿಡಲಾಗಿದೆ.
ಶೃಂಗೇರಿ, ಹೊರನಾಡು, ಕೊಲ್ಲೂರು ಮುಂತಾದ ಮಲೆನಾಡಿನ ಕ್ಷೇತ್ರಗಳಿಗೆ, ಘಾಟಿ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಮುಂತಾದ ಬಯಲುಸೀಮೆಯ ಕ್ಷೇತ್ರಗಳಿಗೆ ತೆರಳುವ ಮಹಿಳಾ ಭಕ್ತಾದಿಗಳ ಸಂಖ್ಯೆಯಲ್ಲಿಯೂ ತುಸು ಏರಿಕೆ ಕಂಡುಬಂದಿದೆ.