ಸಮಗ್ರ ನ್ಯೂಸ್ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿಯಲ್ಲಿ ಒಂದಾದ ಶಕ್ತಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣ ಜಾರಿಗೆ ತಂದಿದ್ದು ಜೂ. 11 ರ ಮಧ್ಯಾಹ್ನ ರಾಜ್ಯದೆಲ್ಲೆಡೆ ಚಾಲನೆಯಾದ ಈ ಯೋಜನೆ ಮಹಿಳೆಯರ ಖುಷಿಗೆ ಕಾರಣವಾಗಿದೆ. ಆರಂಭದ ಎರಡು ದಿನದಲ್ಲೆ ಈ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಇದರ ನಡುವೆ ಹುಬ್ಬಳ್ಳಿಯ ವಿವಾಹಿತೆಯೊಬ್ಬಳು ತನ್ನ 11 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು 300 ಕಿಮೀ ದೂರದಲ್ಲಿರುವ ಪ್ರಿಯಕರನನ್ನು ಹುಡುಕಿಕೊಂಡು ಬಂದಿದ್ದಾರೆ. ಪ್ರಿಯಕರನು ಹುಬ್ಬಳ್ಳಿಯವನೇ ಆಗಿದ್ದು ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ದೂರ ಇದ್ದ ಕಾರಣ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ.
ಈ ಅಮರ ಪ್ರೇಮಿ(!)ಗಳಿಗೆ ಶಕ್ತಿ ಯೋಜನೆ ಆಸರೆಯಾಗಿದ್ದು, ಮಹಿಳೆಯರಿಗೆ ರಾಜ್ಯದೆಲ್ಲೆಡೆ ಉಚಿತ ಪ್ರಯಾಣದ ಲಾಭ ಪಡೆದ ಮಹಿಳೆ ತನ್ನ ಹಸುಗೂಸನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದಾಳೆ . ಮಹಿಳೆಯ ಈ ಪ್ರೇಮಕಥೆ ಮನೆಯವರಿಗೂ ಗೊತ್ತಿದ್ದ ಕಾರಣ ಕೂಡಲೇ ಮನೆಯವರು ಪುತ್ತೂರಿನತ್ತ ಕಣ್ಣು ಹಾಯಿಸಿದ್ದಾರೆ .
ತಡ ರಾತ್ರಿ ಕೋಡಿಂಬಾಡಿಗೆ ತಲುಪಿದ ಮನೆಯವರು ಮಹಿಳೆ ಹಾಗೂ ಪ್ರಿಯಕರನಿಗಾಗಿ ಹುಡುಕಾಡಿದ್ದಾರೆ. ಈ ವಿಷಯವನ್ನು ಸಾರ್ವಜನಿಕರು ಪುತ್ತೂರು ಪೊಲೀಸರಿಗೆ ತಿಳಿಸಿದ್ದರು ಎನ್ನಲಾಗಿದ್ದು ಪೊಲೀಸರು ಹುಡುಕಾಟಕ್ಕೆ ನೆರವಾಗಿದ್ದಾರೆ. ಆಗಾಗಲೇ ತಡವಾಗಿದ್ದು ಈ ವೇಳೆ ಪ್ರಿಯಕರ ಕೋಡಿಂಬಾಡಿಯಿಂದ ಪರಾರಿಯಾಗಿದ್ದಾನೆ.
ಪ್ರಿಯತಮೆ ಕೋಡಿಂಬಾಡಿ ತಲುಪುತ್ತಲೇ ಪ್ರಿಯಕರನು ಜೊತೆಯಲ್ಲಿ ಎಸ್ಕೆಪ್ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ . ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಅಧಾರದಲ್ಲಿ ಪತ್ತೆ ಮಾಡಿದಾಗ ಪ್ರಿಯಕರನ ಮೊಬೈಲ್ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಬಳಿ ತೋರಿಸುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ಈ ಪ್ರೇಮಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಮಗು ಮಾತ್ರ ಬಡವಾಗಿದ್ದು ಸುಳ್ಳಲ್ಲ.