ಮಿಲ್ಕಾ ಸಿಂಗ್..
ಈ ಹೆಸರೇ ಸ್ಫೂರ್ತಿಯ ಚಿಲುಮೆ. ಟ್ರ್ಯಾಕ್ ನಲ್ಲಿ ಓಡಲು ಶುರು ಮಾಡುವ ಪ್ರತಿ ಅಥ್ಲೀಟ್ ಗೆ ಭರವಸೆಯ ಬೆಳಕು ಈ ಒಂದು ಹೆಸರು. ಮಿಲ್ಕಾ ಸಿಂಗ್ ಅಂದ್ರೆ ಓಟ.. ಓಟ ಅಂದ್ರೆ ಮಿಲ್ಕಾ ಸಿಂಗ್.. ಅಂತಹುದ್ದೊಂದು ಮಾಂತ್ರಿಕತೆ ಮಿಲ್ಕಾ ಸಿಂಗ್ ಹೆಸರಿನಲ್ಲಿದೆ.
ಭಾಘ್ ಮಿಲ್ಕಾ.. ಭಾಘ್ ಮಿಲ್ಕಾ.. ಹೌದು ಮಿಲ್ಕಾ ಸಿಂಗ್ ಮೊದಲು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ್ದರು. ನಂತರ ಅಕ್ಷರ ಕಲಿಯಲು ಕಿಲೋ ಮೀಟರ್ ಗಟ್ಟಲೇ ಓಡುತ್ತಿದ್ದರು. ಬಳಿಕ ದಂಗೆಯ ಭಯದಿಂದ ಓಡುತ್ತಾ ಗಡಿ ದಾಟಿ ಬಂದಿದ್ದರು.
ಬಡತನದ ಬೇಗೆಯಲ್ಲಿ ಬದುಕು ಕಲ್ಪಿಸಿಕೊಳ್ಳಲು ಹಗಲಿರುಳು ಓಡಿದ್ದರು. ಓಡುತ್ತಲೇ ಸಾಧನೆಯ ಉತ್ತುಂಗಕ್ಕೇರಿದ್ದರು. ನೋಡನೋಡುತ್ತಲೇ ಭಾರತದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರಾಡುವಂತೆ ಮಾಡಿದ್ದರು. ಕೊನೆಗೆ ಭಾರತದ ಮಣ್ಣಲ್ಲೇ ತನ್ನ ಕೊನೆಯ ಉಸಿರನ್ನು ಚೆಲ್ಲಿದ್ದರು. ಇದು ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ಅವರ ಬದುಕಿನ ಚಿತ್ರಣ.
ನವೆಂಬರ್ 20, 1929. ಮುಝಾಫಗಢದ ಗೋವಿಂದ್ ಪುರ ಮಿಲ್ಕಾ ಸಿಂಗ್ ಅವರ ಹುಟ್ಟೂರು. ಪಂಜಾಬ್ ಪ್ರಾಂತ್ಯದಲ್ಲಿರುವ ಸಣ್ಣ ಗ್ರಾಮ. ಅದು ಈಗ ಪಾಕಿಸ್ತಾನದ ಭಾಗವಾಗಿದೆ. 15 ಮಂದಿ ಮಕ್ಕಳಲ್ಲಿ ಬದುಕಿಳಿದ ಎಂಟನೇಯವರಲ್ಲಿ ಮಿಲ್ಕಾ ಸಿಂಗ್ ಕೂಡ ಒಬ್ಬರು. ಈ ನಡುವೆ ಬಾಲ್ಯದಲ್ಲೇ ಮಿಲ್ಕಾ ಸಿಂಗ್ ಅವರು ಅನಾಥರಾದ್ರು. ಅಪ್ಪ – ಅಮ್ಮ ಮತ್ತು ಅಣ್ಣ ಹಾಗೂ ಇಬ್ಬರು ಅಕ್ಕಂದಿರು ಗಲಭೆಯೊಂದರಲ್ಲಿ ಸಾವನ್ನಪ್ಪಿದ್ದರು.
ಈ ಸಾವನ್ನು ಕಣ್ಣಾರೆ ಕಂಡಿದ್ದ ಮಿಲ್ಕಾ ಸಿಂಗ್ ಓಡುತ್ತಲೇ ಗಡಿ ದಾಟಿ ಭಾರತಕ್ಕೆ ಬಂದರು. ಆದರೆ ಮಿಲ್ಕಾ ಸಿಂಗ್ ಭಾರತದಲ್ಲಿ ಕಂಡಿದ್ದು ಕೂಡ ಬರೀ ಕೊಲೆಗಳನ್ನು. ಪಂಜಾಬ್ ನಲ್ಲಿ ಹಿಂದೂ ಮತ್ತು ಸಿಖ್ ನಡುವೆ ಗಲಭೆ ನಡೆಯುತ್ತಿದ್ದ ಸಂದರ್ಭದಲ್ಲಿ ದೆಹಲಿಗೆ ಬಂದ ಮಿಲ್ಕಾ ಸಿಂಗ್ ತನ್ನ ಅಕ್ಕನ ಮನೆಯನ್ನು ಸೇರಿಕೊಂಡ್ರು. ಬಳಿಕ ನಿರಾಶ್ರಿತರ ತಾಣದಲ್ಲೂ ವಾಸವಾಗಿದ್ದರು. ತುತ್ತು ಅನ್ನಕ್ಕಾಗಿ ಬ್ರಿಟಿಷ್ ಸೈನಿಕರ ಶ್ಯೂ ಪಾಲೀಶ್ ಕೂಡ ಮಾಡಿದ್ದರು.
ಈ ಹಂತದಲ್ಲಿ ಮಿಲ್ಕಾ ಸಿಂಗ್ ಅವರು ಭ್ರಮ ನಿರಸನಗೊಂಡಿದ್ದರು. ತಾನು ಡಕಾಯಿತನಾಗಬೇಕು ಅನ್ನೋ ತೀರ್ಮಾನಕ್ಕೂ ಬಂದಿದ್ದರು. ಆ ಸಮಯದಲ್ಲಿ ಮಿಲ್ಕಾ ಸಿಂಗ್ ಅವರನ್ನು ಕೈಹಿಡಿದು ಸರಿಯಾದ ದಾರಿಗೆ ತಂದಿದ್ದು ಅವರ ಅಣ್ಣ ಮಲ್ಖಾನ್ ಸಿಂಗ್.
1951ಲ್ಲಿ ಮಿಲ್ಕಾ ಸಿಂಗ್ ತನ್ನ ನಾಲ್ಕನೇ ಪ್ರಯತ್ನದಲ್ಲಿ ಭಾರತೀಯ ಸೇನೆಯನ್ನು ಸೇರಿಕೊಂಡ್ರು. ಸಿಕಂದರಬಾದ್ ನ ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೇಂದ್ರದಲ್ಲಿದ್ದಾಗ ಮಿಲ್ಕಾ ಸಿಂಗ್ ಅಥ್ಲೆಟಿಕ್ಸ್ ಕಡೆ ಗಮನ ಹರಿಸಿದ್ರು. ಕ್ರಾಸ್ ಕಂಟ್ರಿ ರೇಸ್ ನಲ್ಲಿ ಆರನೇ ಸ್ಥಾನ ಪಡೆದ ಮಿಲ್ಕಾ ಸಿಂಗ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.
ನೋಡ ನೋಡುತ್ತಲೇ, ವೇಗ ವೇಗವಾಗಿ ಓಡುತ್ತಲೇ ಭಾರತೀಯ ಅಥ್ಲೆಟಿಕ್ಸ್ ರಂಗದ ಸ್ಟಾರ್ ಆಗಿ ಹೊರಹೊಮ್ಮಿದ್ರು. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸಿದ್ದ ಮಿಲ್ಕಾ ಸಿಂಗ್, 200 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ದಾಖಲೆಯ ಮೇಲೆ ದಾಖಲೆಗಳನ್ನು ಬರೆದ್ರು.
ದಿಕ್ಕು, ಗುರಿ ಇಲ್ಲದೆ ಅನಾಥರಾಗಿದ್ದ ಮಿಲ್ಕಾ ಸಿಂಗ್‍ಗೆ ಹೇಗೆ ಓಡಬೇಕು. ದಾಖಲೆ ಅಂದ್ರೆ ಏನು, ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ ಒಲಿಂಪಿಕ್ಸ್ ಅಂದ್ರೆ ಏನು ಎಂಬುದೇ ಗೊತ್ತಿರಲಿಲ್ಲ. ಅಂತಹ ಮಿಲ್ಕಾ ಸಿಂಗ್ ಮುಂದೊಂದು ದಿನ ಮಿಲ್ಕಾ ಸಿಂಗ್ ಅಂದ್ರೆ ಓಟ.. ಓಟ ಅಂದ್ರೆ ಮಿಲ್ಕಾ ಸಿಂಗ್ ಅನ್ನುವಷ್ಟರ ಮಟ್ಟಿಗೆ ಬೆಳೆದು ನಿಂತರು.
1956ರ ಮೆಲ್ಬರ್ನ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಮಿಲ್ಕಾ ಸಿಂಗ್ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಓಡಿದ್ದ ರೀತಿಯನ್ನು ಭಾರತೀಯ ಕ್ರೀಡಾಲೋಕ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ ಕೇವಲ 0.1 ಸೆಕೆಂಡಿನ ಅಂತರದಿಂದ ಮಿಲ್ಕಾ ಸಿಂಗ್ ಅವರಿಗೆ ಕಂಚಿನ ಪದಕ ಕೈತಪ್ಪಿ ಹೋಗಿತ್ತು. 1964ರ ಒಲಿಂಪಿಕ್ಸ್ ನಲ್ಲೂ ಮಿಲ್ಕಾ ಸಿಂಗ್ ಸ್ಪರ್ಧಿಸಿದ್ದರು.
ಏಷ್ಯಾನ್ ಕ್ರೀಡಾಕೂಟಗಳಲ್ಲಿ ಮಿಲ್ಕಾ ಸಿಂಗ್ ಅದ್ಭುತ ಸಾಧನೆ ಮಾಡಿದ್ದರು. 1958ರ ಏಷ್ಯನ್ ಗೇಮ್ಸ್ ನಲ್ಲಿ 200 ಮೀಟರ್ ಮತ್ತು 400 ಮೀಟರ್ ಓಟಗಳಲ್ಲಿ ಚಿನ್ನದ ನಗೆ ಬೀರಿದ್ದರು. ಅದೇ ರೀತಿ 1958ರ ಕಾಮನ್ ವೆಲ್ತ್ ಗೇಮ್ಸ್ ನ 440 ಯಾಡ್ರ್ಸ್ ಓಟದಲ್ಲೂ ಚಿನ್ನ ಜಯಿಸಿದ್ದರು. 1962ರ ಏಷ್ಯನ್ ಗೇಮ್ಸ್ ನ 400 ಮೀಟರ್ ಓಟದಲ್ಲಿ ಚಿನ್ನ ಮತ್ತು 4/400 ರಿಲೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 1964ರ ರಾಷ್ಟ್ರೀಯ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಮಿಲ್ಕಾ ಸಿಂಗ್ ಸ್ಪರ್ಧಿಸಿದ್ದ 80 ಓಟದಲ್ಲಿ 77ಬಾರಿ ಮೊದಲ ಸ್ಥಾನ ಗಳಿಸಿದ್ದರು. ಇದು ಮಿಲ್ಕಾ ಸಿಂಗ್ ಅವರು ಹಿರಿಮೆ ಮತ್ತು ಗರಿಮೆ.
ಅಂದ ಹಾಗೇ ಮಿಲ್ಕಾ ಸಿಂಗ್ ಅವರಿಗೆ ಫ್ಲೈಯಿಂಗ್ ಸಿಖ್ ಅನ್ನೋ ಹೆಸರು ಬಂದಿದ್ದು 1960ರಲ್ಲಿ. ತನ್ನ ಬದ್ಧ ಪ್ರತಿಸ್ಪರ್ಧಿ ಪಾಕಿಸ್ತಾನದ ಅಬ್ದುಲ್ ಖಾಲೀಕ್ ವಿರುದ್ಧ ಗೆದ್ದಾಗ ಪಾಕಿಸ್ತಾನದ ಜನರಲ್ ಅಯೂಬ್ ಖಾನ್ ಅವರು ಮಿಲ್ಕಾ ಸಿಂಗ್ ಓಡುವ ರೀತಿಯನ್ನು ಕಂಡು ಫ್ಲೈಯಿಂಗ್ ಸಿಂಗ್ ಎಂದು ಉದ್ಘಾರವೆತ್ತಿದ್ದರು.
ಜವಾನಾನಾಗಿ ಭಾರತೀಯ ಸೇನೆ ಸೇರಿಕೊಂಡಿದ್ದ ಮಿಲ್ಕಾ ಸಿಂಗ್ ಅವರ ವೇತನ 39 ರೂಪಾಯಿ ಎಂಟು ಆಣೆ. ಆದ್ರೆ ಮಿಲ್ಕಾ ಸಿಂಗ್ ಯಾವತ್ತಿಗೂ ದುಡ್ಡಿಗೆ ಆಸೆ ಪಟ್ಟವರಲ್ಲ. 1959ರಲ್ಲಿ ಮಿಲ್ಕಾ ಸಿಂಗ್ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಆನಂತರ ಭಾರತ ಸರ್ಕಾರದಿಂದ ಯಾವುದೇ ಗೌರವ ಸಿಕ್ಕಿಲ್ಲ. 2001ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆದ್ರೆ ಮಿಲ್ಕಾ ಸಿಂಗ್ ಅರ್ಜುನ ಪ್ರಶಸ್ತಿಯನ್ನು ನಿರಾಕರಿಸಿದರು. ಯಾಕಂದ್ರೆ ಈ ಪ್ರಶಸ್ತಿ ನನಗೆ 40 ವರ್ಷಗಳ ಹಿಂದೆ ಬರಬೇಕಿತ್ತು. ಈಗ ಅಲ್ಲ ಎಂದು ಖಾರವಾಗಿ ಹೇಳಿದ್ದರು.
ಇನ್ನು ಮಿಲ್ಕಾ ಸಿಂಗ್ ತನಗೆ ಸಿಕ್ಕ ಎಲ್ಲಾ ಪ್ರಶಸ್ತಿ, ಪದಕ ಮತ್ತು ಗೌರವಗಳನ್ನು ಪಟಿಯಾಲದ ಸ್ಪೋರ್ಟ್ಸ್ ಮ್ಯೂಸಿಯಂಗೆ ಕೊಟ್ಟಿದ್ದಾರೆ. ಭಾಘ್ ಮಿಲ್ಕಾ ಭಾಘ್ ಮಿಲ್ಕಾ ಸಿನಿಮಾಗೆ ಅವರು ಪಡೆದಂತಹ ಸಂಭಾವನೆ ಕೇವಲ ಒಂದು ರೂಪಾಯಿ. ಆ ನಂತರ ಸಿನಿಮಾದಿಂದ ಬಂದ ಲಾಭಾಂಶವನ್ನು ಮಿಲ್ಕಾ ಸಿಂಗ್ ಚಾರಿಟೇಬಲ್ ಟ್ರಸ್ಟ್ ಗೆ ನೀಡಿದ್ದರು.
2012ರಿಂದ ಮಿಲ್ಕಾ ಸಿಂಗ್ ಅವರು ಚಂಢೀಗಢದಲ್ಲಿ ವಾಸವಾಗಿದ್ದರು. ಮಿಲ್ಕಾ ಸಿಂಗ್ ಅವರ ಪತ್ನಿ ನಿರ್ಮಲ್ ಕೌರ್. ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ. ಇನ್ನು ಮಿಲ್ಕಾ ಸಿಂಗ್ ಅವರಿಗೆ ನಾಲ್ವರು ಮಕ್ಕಳು. ಒಬ್ಬ ಮಗ ಹಾಗೂ ಮೂವರು ಹೆಣ್ಣುಮಕ್ಕಳು. ಮಗ ಜೀವ್ ಮಿಲ್ಕಾ ಸಿಂಗ್ ಅವರು ಗಾಲ್ಫ್ ಆಟಗಾರ. 1999ರಲ್ಲಿ ಟೈಗರ್ ಹಿಲ್ ಕದನಲ್ಲಿ ಹುತಾತ್ಮರಾದ ಹರ್ವಿಂದರ್ ಬಿಕ್ರಮ್ ಅವರ ಏಳು ವರ್ಷದ ಮಗನನ್ನು ದತ್ತುಪಡೆದುಕೊಂಡಿದ್ದರು.
ತನ್ನ 91ನೇ ವಯಸ್ಸಿನಲ್ಲಿ ಮಿಲ್ಕಾ ಸಿಂಗ್ ಅವರು ಈ ಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಐದು ದಿನಗಳ ಹಿಂದೆಯಷ್ಟೇ ಪತ್ನಿ ಕಳೆದುಕೊಂಡಿದ್ದ ಮಿಲ್ಕಾ ಸಿಂಗ್ ಇದೀಗ ತನ್ನ ಯಾತ್ರೆಯನ್ನು ಮುಗಿಸಿದ್ದಾರೆ. ಕೋವಿಡ್ ಅನ್ನೋ ಮಹಾಮಾರಿಯಿಂದ ಚೇತರಿಸಿಕೊಂಡಿದ್ದರೂ ಮಿಲ್ಕಾ ಸಿಂಗ್ ಅವರ ಉಸಿರು ಈಗ ನಿಂತುಹೋಗಿದೆ.
ಬಡತನ, ಗಲಭೆ, ಸಾವು, ರಕ್ತಚರಿತ್ರೆಯ ಹಾದಿಯನ್ನು ನೋಡುತ್ತ, ಓಡುತ್ತಾ ಯಶಸ್ಸಿನತ್ತ ಏರುತ್ತಾ, ಸಾರ್ಥಕ ಜೀವನ ಸಾಗಿಸಿದ್ದ ಮಹಾನ್ ಕ್ರೀಡಾಪಟು ಮಿಲ್ಕಾ ಸಿಂಗ್. ನಿಮಗಿದೋ ನಮನ..