ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಜೂ.21ರಿಂದ ಅನ್ಲಾಕ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.
ಜೂ. 21 ರ ವರೆಗೆ ದಕ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲು ರಾಜ್ಯ ಸರ್ಕಾರ ತಿಳಿಸಿತ್ತು. ಜೂ.21 ರಿಂದ ನಿರ್ಬಂಧ ಸಡಿಲಿಸಲು ದಕ ಜಿಲ್ಲಾಡಳಿತ ಚಿಂತಿಸಿದೆ. ಇನ್ನು ಅದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಟ್ಟಿ ಮಾಡಲಾಗಿದೆ. ಎಲ್ಲಾ ಅಂಗಡಿಗಳನ್ನು ವಾರದ ಕೆಲವು ದಿನಗಳಲ್ಲಿ ತೆರೆಯಲು ಚಿಂತಿಸಲಾಗಿದೆ. ವಾರದಲ್ಲಿ ಕೆಲವು ದಿನ ಅಗತ್ಯ ವಸ್ತು, ಉಳಿದ ದಿನ ಇತರೆ ಅಂಗಡಿ ತೆರೆಯಲು ಅನುಮತಿ ನೀಡುವ ಸಾಧ್ಯತೆ ಇದೆ. ಇಷ್ಟು ದಿನ ಮುಚ್ಚಿದ್ದ ವ್ಯವಹಾರದ ನಷ್ಟ ತಪ್ಪಿಸಲು ಅನುಮತಿ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎನ್ನಲಾಗಿದೆ. ಥೀಯೇಟರ್, ಸಭೆ ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರಿಯಲಿದ್ದು, ಬಸ್ ಸಂಚಾರದ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ. ಯಾವುದಕ್ಕೂ ರಾಜ್ಯ ಸರ್ಕಾರ ಯಾವ ಆದೇಶ ಹೊರದಿಸಲಿದೆ ಎಂದು ಕಾದುನೋಡಬೇಕಿದೆ.
ಆದರೆ ಕೋವಿಡ್ ಪಾಸಿಟಿವ್ ಪ್ರಕರಣಗಳು ನಿತ್ಯ ಏರುತ್ತಿದ್ದು, ನಿಯಂತ್ರಣಕ್ಕೆ ಬರುವ ತನಕ ಲಾಕ್ಡೌನ್ ಸಡಿಲಿಕೆ ಬೇಡ ಎನ್ನುವ ಕೂಗು ಜನರಿಂದ ಕೇಳಿ ಬರುತ್ತಿದೆ.