ಸುಳ್ಯ: ಪೌರಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದು ಕ್ವಾರಂಟೈನ್ ಗೆ ಒಳಗಾದ ಕಾರಣ, ಸ್ವತಃ ನಗರ ಪಂಚಾಯತ್ ಅಧ್ಯಕ್ಷರೇ ಕಸ ಸಂಗ್ರಹ ವಾಹನ ಚಾಲನೆ ಮಾಡಿ ಮಾದರಿಯಾಗಿದ್ದಾರೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಮಾದರಿ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದವರು. ಪ್ರತಿದಿನ ನಗರದ ತ್ಯಾಜ್ಯ ನಿರ್ವಹಣೆ ಮಾಡುವುದು ನಗರ ಪಂಚಾಯತ್ ನ ಜವಾಬ್ದಾರಿಯಾಗಿದೆ. ಆದ್ದರಿಂದ ಕೊರೋನಾ ಕಾರಣದಿಂದ ವಾಹನ ಚಾಲಕರ ಕೊರತೆ ಎದುರಾಗಿದ್ದರೂ ಸ್ವತಹ ನಗರ ಪಂಚಾಯತ್ ಅಧ್ಯಕ್ಷರೇ ಈ ಕೆಲಸ ಮಾಡಿದ್ದಾರೆ.
ಒಬ್ಬರು ಪೌರಕಾರ್ಮಿಕರ ಜೊತೆ ನಗರದಲ್ಲಿ ಕಸ ಸಂಗ್ರಹಿಸಲು ಬಂದ ಅಧ್ಯಕ್ಷರಿಗೆ ನಗರ ಪಂಚಾಯತ್ ಆರೋಗ್ಯ ನಿರೀಕ್ಷಕ ಲಿಂಗರಾಜು ಸಾಥ್ ನೀಡಿದ್ದಾರೆ.
ಪ್ರತಿ ದಿನ ಎಲ್ಲ ಭಾಗಗಳಲ್ಲಿ ಸಂಚರಿಸಿ, ತ್ಯಾಜ್ಯ ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ. ಎರಡು ದಿನಕ್ಕೊಮ್ಮೆ ಒಂದೊಂದು ಭಾಗಕ್ಕೆ ಹೋಗಲು ಯೋಚಿಸಲಾಗಿದೆ. ತ್ಯಾಜ್ಯವನ್ನು ತಂದು ವಾಹನಕ್ಕೆ ಕೊಡುವವರಿಗೆ ಹಸಿ ಕಸ– ಒಣ ಕಸ ಪ್ರತ್ಯೇಕಿಸುವ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಶುಕ್ರವಾರ ಸುಳ್ಯ ಪಟ್ಟಣದ ಎ.ಪಿ.ಎಂ.ಸಿ ರಸ್ತೆ, ಪದವಿಪೂರ್ವ ಕಾಲೇಜು ರಸ್ತೆ ಮೊದಲಾದ ಕಡೆಗಳ ಕಸ ಸಂಗ್ರಹಕ್ಕೆ ಬಂದ ವಿನಯ್ ಕುಮಾರ್ ಕಂದಡ್ಕ ಹೇಳಿದ್ದಾರೆ.