ಸಮಗ್ರ ನ್ಯೂಸ್: ಬಾವಿಗೆ ಬಿದ್ದ ಚಿರತೆಯೊಂದುಮೇಲೆ ಬಾರದೇ ಇದ್ದಾಗ ಬೆಂಕಿಯಿಂದ ಬೆದರಿಸಿ ಚಿರತೆಯನ್ನು ಓಡಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೆಂಜೂರು ಎಂಬಲ್ಲಿ ನಡೆದಿದೆ.
ಕಾಡಿನಿಂದ ನಾಡಿಗೆ ಆಹಾರ ಹುಡುಕಿಕೊಂಡು ಬಂದ ಚಿರತೆ ಬ್ರಹ್ಮಾವರದ ಕೆಂಜೂರಿನ ಮನೆಯೊಂದರ ಬಾವಿಗೆ ಬಿದ್ದಿತ್ತು. ಕೂಡಲೇ ಮನೆಯವರು ಅರಣ್ಯ ಇಲಾಖೆಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬಂದಿ ದೊಡ್ಡ ಏಣಿಯೊಂದನ್ನು ಇಟ್ಟು ಚಿರತೆ ಮೇಲೆ ಬರಬಹುದು ಎಂದು ತುಂಬಾ ಹೊತ್ತು ಕಾದು ನೋಡಿದರು.
ಆದರೆ ಭಯಗೊಂಡ ಚಿರತೆ ಬಾವಿಯಿಂದ ಮೇಲಕ್ಕೆ ಬಾರದೇ ಇದ್ದಾಗ, ಕೊನೆಯ ಉಪಾಯ ಎಂಬಂತೆ ಅರಣ್ಯ ಇಲಾಖೆಯ ಸಿಬಂದಿ, ದೊಡ್ಡ ಕೋಲೊಂದಕ್ಕೆ ಬಟ್ಟೆ ಸುತ್ತಿ ಬೆಂಕಿ ಕೊಟ್ಟು ಅದನ್ನು ಬಾವಿಗೆ ಇಳಿಸಿದರು. ಆಗ ಚಿರತೆ ಬೆಂಕಿಯನ್ನು ಕಂಡು ಭಯದಿಂದ ಏಣಿ ಏರಿ ಬಾವಿಯಿಂದ ಮೇಲಕ್ಕೆ ಬಂದು ಓಡಿ ತಪ್ಪಿಸಿಕೊಂಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.