ಸಮಗ್ರ ನ್ಯೂಸ್: ಗುಜರಿ ವ್ಯವಹಾರ ಮಾಡುತ್ತಿದ್ದವರು ಮಂತ್ರವಾದಿಯ ಮುಖವಾಡ ಹಾಕಿ ಜನರಿಗೆ ಮೋಸ ಮಾಡುತ್ತಿದ್ದ ಇಬ್ಬರಿಗೆ ಸ್ಥಳೀಯ ಯುವಕರು ಬಿಸಿ ಬಿಸಿ ಕಜ್ಜಾಯ ನೀಡಿ ಮುಖವಾಡ ಕಳಚಿದ ಘಟನೆ ಪುತ್ತೂರಿನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ವಳಾಲು ಪರಿಸರದಲ್ಲಿ ನಡೆದಿದೆ. ಈ ಬಗ್ಗೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಡಬ ಕೋಡಿಂಬಾಳ ಗ್ರಾಮದ ನಿವಾಸಿಗಳಾದ ಆಲಿ ಮತ್ತು ಮಮ್ಮು ಎಂಬವರು ಈ ಹಿಂದೆ ಗುಜರಿ ವ್ಯವಹಾರ ಮಾಡುತ್ತಿದ್ದರು. ಬಳಿಕ ಮಂತ್ರವಾದಿಯ ಮುಖವಾಡದಲ್ಲಿ ಹಲವೆಡೆ ಪರಿಚಿತರಾಗಿದ್ದರು. ಹೀಗಾಗಿ ಉಪ್ಪಿನಂಗಡಿ ಸಮೀಪದ ಮಗುವಿಗೆ ಆರೋಗ್ಯ ಸಮಸ್ಯೆ ಕಂಡು ಬಂದ ಕಾರಣ ಮುಸ್ಲಿಂ ಸಮುದಾಯಕ್ಕೆ ಸೇರಿದ ಕುಟುಂಬವೊಂದು ಮಂತ್ರದ ಹೆಸರಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಹೀಗಾಗಿ ವಾರದ ಹಿಂದೆ ಮನೆಗೆ ಹೋಗಿ ಕಪ್ಪು ನೂಲು ಮಂತ್ರಿಸಿ ಮಗುವಿಗೆ ಕಟ್ಟಿದ್ದ .ಈ ವೇಳೆ ನಕಲಿ ಮಂತ್ರವಾದಿಯ ಪರಿಚಯದ ವ್ಯಕ್ತಿ ಅದೇ ಮನೆಗೆ ಬಂದಿದ್ದು ಆತ ಈ ಸನ್ನಿವೇಶ ನೋಡಿ ಅಚ್ಚರಿಗೊಂಡಿದ್ದ ಎನ್ನಲಾಗಿದೆ.
ಈ ಬಗ್ಗೆ ಅನುಮಾನಗೊಂಡು ಸ್ಥಳೀಯ ಯುವಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ ಬಳಿಕ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು ಮಾತುಕತೆಯ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.