ಸಮಗ್ರ ನ್ಯೂಸ್: ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳಿಗೆ ಜೂನ್ 11 ಮತ್ತು 12ರಂದು ರಾಷ್ಟ್ರಪತಿ ಭೇಟಿ ಮತ್ತು ದೆಹಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊರಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನ ಸೂರಸಿದ್ಧ ಹೇರೂರು, ಶಂಕರ ಬೋಳಂಬಳ್ಳಿ, ಹೆಬ್ರಿ ತಾಲ್ಲೂಕಿನ ಪ್ರಿಯದರ್ಶಿನಿ, ಬ್ರಹ್ಮಾವರದ ನೀಲು ಕಳತ್ತೂರು, ದಕ್ಷಿಣ ಕನ್ನಡ ಜಿಲ್ಲೆಯಿಂದ ಮರಕಡದ ಎಂ.ಸುಂದರ, ಸುಳ್ಯ ನೆಲ್ಲೂರು ಕೆಮ್ರಾಜೆಯ ರಾಮಚಂದ್ರ, ಕಂಕನಾಡಿಯ ರತ್ನಾ, ಕಿನ್ನಿಗೋಳಿಯ ಸುಪ್ರಿಯಾ ಅವರು ಜೂನ್ 10ರಂದು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
‘ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರದ ಮೇಲುಸ್ತುವಾರಿಯಲ್ಲಿ ಕರ್ನಾಟಕ ರಾಜ್ಯದಿಂದ ಕೊರಗರು ಮತ್ತು ಜೇನುಕುರುಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಕೊರಗರಿಗೆ ಪ್ರತ್ಯೇಕ ನಿಗಮ/ಪ್ರಾಧಿಕಾರ ರಚನೆ, ಕೊರಗರ ಸಾಂಸ್ಕೃತಿಕ ವಲಯ ನಿರ್ಮಾಣ, ವಿಶೇಷ ರಾಜಕೀಯ ಮೀಸಲಾತಿ, ಉಚಿತ ಶಿಕ್ಷಣ, ನೇರ ನೇಮಕಾತಿ ಮೂಲಕ ಉದ್ಯೋಗ ಭದ್ರತೆ ಸೇರಿದಂತೆ ಹಲವಾರು ಬೇಡಿಕೆಗಳುಳ್ಳ ಮನವಿಯಲ್ಲಿ ರಾಷ್ಟ್ರಪತಿ ಅವರಿಗೆ ಸಲ್ಲಿಸಲಾಗುವುದು’ ಎಂದು ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಸುಂದರ ಅವರು ತಿಳಿಸಿದ್ದಾರೆ.