ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಹರಡುವಿಕೆ ತಡೆಗೆ ಜನವರಿಯಿಂದಲೇ ಲಸಿಕಾ ಅಭಿಯಾನ ಆರಂಭವಾಗಿದೆ. ಆದರೆ ಲಸಿಕೆ ತೆಗೆದುಕೊಂಡ ನಂತರ ಆರೋ ಗ್ಯದ ಮೇಲಾಗುವ ಪರಿಣಾಮಗಳ ಕುರಿತು ಕೆಲವು ಚರ್ಚೆಗಳೂ ಮುನ್ನೆಲೆಗೆ ಬಂದಿವೆ.
ಕೊರೊನಾ ಲಸಿಕೆ ಪಡೆದುಕೊಂಡ ನಂತರ ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದೆ. ವೀರ್ಯದ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ಕೊರೊನಾ ಲಸಿಕೆ ಪರಿಣಾಮ ಬೀರುತ್ತದೆ ಎಂಬ ಕೆಲವು ಮಾತುಗಳು ಕೇಳಿಬಂದಿದ್ದವು. ಈ ಕುರಿತು ಮಿಯಾಮಿ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ. 45 ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಲಸಿಕೆ ಪಡೆಯುವ ಮುನ್ನ ಹಾಗೂ ನಂತರ ಅವರನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಅಧ್ಯಯನ ಏನು ಹೇಳುತ್ತಿದೆ?
ವೀರ್ಯದ ಸಾಂದ್ರತೆ ಹಾಗೂ ಪ್ರಮಾಣ ವಿಶ್ಲೇಷಣೆ:
ಅಧ್ಯಯನಕ್ಕೆ ಒಳಪಟ್ಟಿದ್ದ 45 ಪುರುಷರ ಪೈಕಿ 21 ಪುರುಷರು ಫೈಜರ್ ಲಸಿಕೆಯನ್ನು ಹಾಗೂ 24 ಪುರುಷರು ಮಾಡೆರ್ನಾ ಲಸಿಕೆಯನ್ನು ಪಡೆದುಕೊಂಡಿದ್ದರು.
ಈ ಪುರುಷರಲ್ಲಿನ ವೀರ್ಯಾಣು ಸಾಂದ್ರತೆ ಹಾಗೂ ಒಟ್ಟಾರೆ ವೀರ್ಯಾಣುಗಳ ಸಂಖ್ಯೆಯನ್ನು ಪರಿಶೀಲನೆ ನಡೆಸಲಾಗಿದೆ. ಲಸಿಕೆ ಪಡೆಯುವ ಮುನ್ನ ಹಾಗೂ ಎರಡೂ ಡೋಸ್‌ಗಳ ಲಸಿಕೆ ಪಡೆದ ನಂತರ ವೀರ್ಯದ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಆಗಿರುವ ಬದಲಾವಣೆಯನ್ನು ವಿಶ್ಲೇಷಣೆ ನಡೆಸಲಾಗಿದೆ.
ಲಸಿಕೆ ಪಡೆದ ನಂತರ ವೀರ್ಯದ ಸಾಂದ್ರತೆ ಹೆಚ್ಚಾಗಿದೆ
“ಅಮೆರಿಕ ಮೆಡಿಕಲ್ ಅಸೋಸಿಯೇಷನ್”ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಕೆಲವು ವಿಶ್ಲೇಷಣೆಗಳ್ನು ಉಲ್ಲೇಖಿಸಲಾಗಿದೆ. “ಎರಡನೇ ಡೋಸ್ ಲಸಿಕೆ ಪಡೆದ ನಂತರ ಸರಾಸರಿ ವೀರ್ಯದ ಸಾಂದ್ರತೆಯು ಗಮನಾರ್ಹವಾಗಿ 30 ಮಿಲಿಯನ್ ಮಿಲಿ ಲೀಟರ್ ಹಾಗೂ ವೀರ್ಯಾಣುವಿನ ಸರಾಸರಿ ಸಂಖ್ಯೆಯು 44 ಮಿಲಿಯನ್‌ಗೆ ಏರಿದೆ ಎಂದು ತಿಳಿಸಿದೆ. ಲಸಿಕೆ ಪಡೆದ ನಂತರ ವೀರ್ಯದ ಪ್ರಮಾಣ ಹಾಗೂ ವೀರ್ಯದ ಚಲನಶೀಲತೆ ಕೂಡ ಹೆಚ್ಚಾಗಿದೆ,” ಎಂದು ಅಧ್ಯಯನ ತಿಳಿಸಿದೆ.
ಲಸಿಕೆ ವೀರ್ಯದ ಸಂಖ್ಯೆ ಮೇಲೆ ಪರಿಣಾಮ ಬೀರದು:
ಲಸಿಕೆ ಪಡೆದ ನಂತರ ಆರೋಗ್ಯವಂತ ಪುರುಷರಲ್ಲಿ ವೀರ್ಯದ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಹೀಗಾಗಿ ಲಸಿಕೆಯಿಂದ ವೀರ್ಯದ ಗುಣಮಟ್ಟ ಹಾಗೂ ಸಂಖ್ಯೆಯ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಅಧ್ಯಯನದ ಲೇಖಕರು ಉಲ್ಲೇಖಿಸಿದ್ದಾರೆ. ಯಾವುದೇ ಕೊರೊನಾ ಲಸಿಕೆಯಲ್ಲಿಯೂ ವೀರ್ಯದ ಗುಣಮಟ್ಟ, ಸಂಖ್ಯೆ ಕಡಿಮೆ ಮಾಡುವ ಅಂಶಗಳು ಇರುವುದಿಲ್ಲ ಎಂದು ಹೇಳಿದ್ದಾರೆ.
ವೀರ್ಯ ಸಂಖ್ಯೆ ತಗ್ಗುವ ಆತಂಕ ವ್ಯಕ್ತಪಡಿಸಿದ್ದ ಅಧ್ಯಯನ
ಕಳೆದ ನವೆಂಬರ್ ತಿಂಗಳಿನಲ್ಲಿ ಚೀನಾದಲ್ಲಿ ಸಂಶೋಧನೆಯೊಂದು ನಡೆದಿತ್ತು. ಕೊರೊನಾದಿಂದ ಸಾವನ್ನಪ್ಪಿದ ಆರು ಪುರುಷ ರೋಗಿಗಳಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಕೊರೊನಾ ಸೋಂಕಿನಿಂದ, ಅತಿ ಹೆಚ್ಚಿನ ಪ್ರೊಟೀನ್‌ನಿಂದಾಗಿ ಪುರುಷ ಜನನಾಂಗದಲ್ಲಿ ಉರಿಯೂತ ಹಾಗೂ ಜೀವಕೋಶ ಹಾನಿಯಾಗುತ್ತದೆ ಎಂದು ತಿಳಿಸಿತ್ತು. ಕೊರೊನಾದಿಂದ ಗುಣಮುಖರಾದ 39% ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗಿತ್ತು. 61% ಪುರುಷರಲ್ಲಿ, ವೀರ್ಯದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಅಧಿಕವಾಗಿತ್ತು ಎಂದು ಅಧ್ಯಯನ ತಿಳಿಸಿದೆ.